October 28, 2025
WhatsApp Image 2024-03-24 at 2.28.07 PM

ಸುಳ್ಯ : ವಾರದ ಹಿಂದೆ ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳ ಗಡಿಭಾಗದ ಕೂಜಿಮಲೆಯ ಎಸ್ಟೇಟ್‌ ಬಳಿಯ ಅಂಗಡಿಯೊಂದಕ್ಕೆ ಬಂದಿದ್ದ ಶಂಕಿತ ನಕ್ಸಲರು ದಿನಸಿ ಸಾಮಾಗ್ರಿ ಪಡೆದು ತೆರಳಿದ್ದರು ಎಂಬ ಸುದ್ದಿ ಭಾರೀ ಸದ್ದು ಮಾಡಿತ್ತು. ಈ ಭಾಗದಲ್ಲಿ ನಕ್ಸಲ್‌ ನಿಗ್ರಹದಳ ನಿರಂತರ ಶೋಧ ಕಾರ್ಯ ನಡೆಸಿತ್ತು. ಆದರೆ ಎಎನ್‌ಎಫ್ ತಂಡಕ್ಕೆ ನಕ್ಸಲರು ಕಾಣಿಸಿರಲಿಲ್ಲ. ಇದೀಗ ಕುಕ್ಕೆ ಸುಬ್ರಹ್ಮಣ್ಯ ಸಮೀಪದ ಐನೆಕಿದು ಗ್ರಾಮದ ಅರಣ್ಯದಂಚಿನ ಮನೆಯೊಂದಕ್ಕೆ ಶಂಕಿತ ನಕ್ಸಲರು ಭೇಟಿ ನೀಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಶನಿವಾರ ಸಂಜೆ 6 ಗಂಟೆ ಸುಮಾರಿಗೆ ಮೂವರು ಅಪರಿಚಿತರಿದ್ದ ತಂಡ ಐನೆಕಿದು ಗ್ರಾಮದ ಅಶೋಕ್ ಎಂಬುವರ ಮನೆಗೆ ಭೇಟಿ ನೀಡಿದ್ದಾರೆ. ಮನೆಯವರೊಂದಿಗೆ ಸುಮಾರು ಒಂದು ಗಂಟೆಗ ಅಧಿಕ ಕಾಲ ತಂಡ ಮಾತುಕತೆ ನಡೆಸಿದೆ. ಬಳಿಕ ಎರಡು ಕೆಜಿಯಷ್ಟು ಅಕ್ಕಿ ಪಡೆದು, ಮೊಬೈಲ್ ಚಾರ್ಜ್ ಮಾಡಿ ಅಲ್ಲಿಂದ ತೆರಳಿದ್ದಾರೆ. ಮೂವರ ಬಳಿಯೂ ಶಸ್ತ್ರಾಸ್ತ್ರಗಳಿತ್ತು ಎಂದು ಹೇಳಲಾಗಿದೆ. ಕಳೆದ ಬಾರಿ ನಕ್ಸಲರು ಕಾಣಿಸಿಕೊಂಡಿದ್ದಾರೆ ಎನ್ನಲಾದ ಕೂಜಿಮಲೆ ಮತ್ತು ಶನಿವಾರ ಕಾಣಿಸಿದ್ದರೆನ್ನಲಾದ ಐನೆಕಿದು ನಡುವೆ ಸುಮಾರು 25 ಕಿ.ಮೀ.ನಷ್ಟೇ ಅಂತರವಿದೆ. ನಕ್ಸಲರು ಭೇಟಿ ನೀಡಿದ ಪ್ರದೇಶ ಕುಮಾರಪರ್ವತದ ಪಾಟಿ ಕುಮೇರಿ ದಟ್ಟ ಕಾಡಿಗೆ ಹತ್ತಿರವಿದೆ. ಇಲ್ಲಿಂದ ಸೋಮವಾರಪೇಟೆ ಮತ್ತು ಇನ್ನೊಂದು ದಾರಿಯಾಗಿ ಗಾಳಿಬೀಡು ಸಂಪರ್ಕವನ್ನು ಮಾಡಬಹುದು. ಆ ಬಳಿಕ ಸಂಪಾಜೆ ಮೂಲಕ ಕೇರಳಕ್ಕೆ ಅರಣ್ಯದೊಳಗೆ ಸಂಪರ್ಕ ಸಾಧಿಸಲು ಸಾಧ್ಯ ಎನ್ನಲಾಗುತ್ತಿದೆ.

About The Author

Leave a Reply