ಬಂಟ್ವಾಳ: ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಬಿ.ಸಿ. ರೋಡ್ ನಾರಾಯಣ ಗುರು ಸಭಾಭವನದಲ್ಲಿ ಗುರುವಾರ ಸಂಜೆ ನಡೆಯಿತು.
ಅಭ್ಯರ್ಥಿ ಪದ್ಮರಾಜ್ ಆರ್. ಮಾತನಾಡಿ, ನಲ್ವತ್ತು ವರ್ಷದಲ್ಲಿ ಕಾಂಗ್ರೆಸ್ ನಾಯಕರು ಹಲವು ಯೋಜನೆಗಳನ್ನು ಜಿಲ್ಲೆಗೆ ತಂದಿದ್ದಾರೆ. ಇದರಲ್ಲಿ ಬಂದರು, ಏರ್ ಪೋರ್ಟ್, ಎನ್.ಎಂ.ಪಿ.ಟಿ., ಕೆ.ಪಿ.ಟಿ.ಸಿ.ಎಲ್. ಹೀಗೆ ಅನೇಕ ಯೋಜನೆಗಳು ಜಿಲ್ಲೆಗೆ ಬಂದಿದ್ದರೆ ಅದಕ್ಕೆ ಕಾಂಗ್ರೆಸ್ ನಾಯಕರು ಕಾರಣ. ನಂತರದ ಮೂವತ್ತ ಮೂರು ವರ್ಷದಲ್ಲಿ ಬಿಜೆಪಿ ನಾಯಕರು ಏನು ಮಾಡಿದ್ದಾರೆ ಎನ್ನುವುದು ನಿಮಗೆ ತಿಳಿದಿದೆ. ಹಾಗಾಗಿ ಜನರ ಬಳಿಗೆ ಹೋಗುವಾಗ ಧೈರ್ಯದಿಂದ ಹೋಗಿ, ಮತ ಕೇಳಿ. ರಾಜ್ಯ ಸರಕಾರದ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸಿ ಎಂದರು.
ತಾನು ಬಡ ಕುಟುಂಬದಿಂದ ಬಂದವನು. ತಂದೆ -ತಾಯಿ ನಮಗೆ ಕೊಟ್ಟಿರುವ ದೊಡ್ಡ ಆಸ್ತಿ ಎಂದರೆ ಶಿಕ್ಷಣ. ನಾನು ವಕೀಲನಾದೆ. ಅದರ ಜೊತೆಗೆ ಸಾಮಾಜಿಕ ಕೆಲಸದಲ್ಲಿ ತೊಡಗಿಸಿಕೊಂಡೆ. ಇದೀಗ ನಾಯಕರು ನನ್ನನ್ನು ಲೋಕಸಭಾ ಚುನಾವಣೆಯ ಅಭ್ಯರ್ಥಿಯಾಗಿ ಘೋಷಿಸಿದ್ದಾರೆ. ಅವರ ಆಶಯಕ್ಕೆ ಧಕ್ಕೆ ಆಗದಂತೆ, ಕಾರ್ಯಕರ್ತರ ಬೆನ್ನೆಲುಬಾಗಿ ಕೆಲಸ ನಿರ್ವಹಿಸುತ್ತೇನೆ ಎಂದರು.
ಚುನಾವಣಾ ಜಿಲ್ಲಾ ಉಸ್ತುವಾರಿ, ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ಬಡವರ ಪರವಾಗಿ ಕಾಂಗ್ರೆಸ್ ಯಾವತ್ತೂ ನಿಂತಿದೆ. ಇದಕ್ಕೆ ಪೂರಕ ಎಂಬಂತೆ ಸಾಮಾಜಿಕ ಹೋರಾಟದಲ್ಲಿ ತೊಡಗಿಸಿಕೊಂಡ ಪದ್ಮರಾಜ್ ಆರ್. ಅವರಿಗೆ ಕಾಂಗ್ರೆಸ್ ಅವಕಾಶ ನೀಡಿದೆ. ಗುರು ಬೆಳದಿಂಗಳು ಎಂಬ ತಂಡ ಕಟ್ಟಿಕೊಂಡು ಬಡವರಿಗಾಗಿ ದುಡಿಯುತ್ತಿದ್ದಾರೆ ಎಂದರು.
ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ರಾಜ್ಯ ಸರಕಾರದ ಗ್ಯಾರೆಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ಮನೆಮನೆಗೆ ತೆರಳಿ ಪ್ರಚಾರ ಕಾರ್ಯ ನಡೆಸುವಂತೆ ಕರೆ ಕೊಟ್ಟ ಅವರು, ಕಾರ್ಯಕರ್ತರ ಒತ್ತಾಗೆ ಪೂರಕವಾಗಿ ಉತ್ತಮ,ಯುವ ಅಭ್ಯರ್ಥಿಯನ್ನು ಪಕ್ಷ ನೀಡಿದೆ. ಅಭ್ಯರ್ಥಿ ಪದ್ಮರಾಜ್ ಆರ್. ಅವರನ್ನು ಗೆಲ್ಲಿಸಿಕೊಡಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ಗೇರು ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀಪ್ ಕುಮಾರ್ ಶೆಟ್ಟಿ, ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಾರಾಮ್ ಕೆ.ಪಿ., ಬಂಟ್ವಾಳ ಚುನಾವಣಾ ಉಸ್ತುವಾರಿ ಪೀಯೂಷ್ ಎಲ್. ರೋಡ್ರಿಗಸ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಜೋರಾ, ಜಿಪಂ ಮಾಜಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ್ ಜೈನ್, ಪಾಣೆಮಂಗಳೂರು ಬ್ಲಾಕ್ ಉಸ್ತುವಾರಿ ಸುದರ್ಶನ್ ಜೈನ್, ಬಂಟ್ವಾಳ ಬ್ಲಾಕ್ ಉಸ್ತುವಾರಿ ಸುಭಾಶ್ ಚಂದ್ರ ಶೆಟ್ಟಿ, ಗ್ಯಾರೆಂಟಿ ಯೋಜನೆಯ ಅಧ್ಯಕ್ಷೆ ಜಯಂತಿ ಪೂಜಾರಿ, ಪ್ರಮುಖರಾದ ಸುರೇಶ್ ಕುಲಾಲ್, ಅಲ್ಬರ್ಟ್ ಮಿನೇಜಸ್ ಮೊದಲಾದವರು ಉಪಸ್ಥಿತರಿದ್ದರು.