
ಮಂಗಳೂರು: ಮಹಿಳೆಯೊಬ್ಬರು ಒಂದು ವರ್ಷ ಪ್ರಾಯದ ತನ್ನ ಹೆಣ್ಣು ಮಗುವೊಂದಿಗೆ ನದಿಗೆ ಹಾರಿ ಆತ್ಮಹತ್ಯೆಗೈದ ಘಟನೆ ಹರೇಕಳ ಕಡವಿನಬಳಿ ನಡೆದಿದೆ. ನೇತ್ರಾವತಿ ನದಿಯಲ್ಲಿ ತಾಯಿ ಹಾಗೂ ಒಂದು ವರ್ಷದ ಮಗುವಿನ ಮೃತದೇಹ ಶುಕ್ರವಾರ ರಾತ್ರಿ ಪತ್ತೆಯಾಗಿದೆ.



ನಾಗರಾಜ್ ಎಂಬವರ ಪತ್ನಿ ಚೈತ್ರಾ( 30) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಚೈತ್ರಾ ಶುಕ್ರವಾರ ಮಧ್ಯಾಹ್ನದ ಬಳಿಕ ತನ್ನ ತನ್ನ ಒಂದು ವರ್ಷದ ಮಗು (ದಿಯಾಂಶ್) ಜತೆ ನಾಪತ್ತೆಯಾಗಿದ್ದರು. ಸಂಜೆ ಈಕೆ ರಿಕ್ಷಾವೊಂದರಲ್ಲಿ ಅಡ್ಯಾರ್-ಹರೇಕಳ ಸೇತುವೆ ದಾಟಿ ಹರೇಕಳ- ಪಾವೂರು ಕಡವಿನ ಬಳಿ ಜಂಕ್ಷನ್‌ನಲ್ಲಿ ಇಳಿದಿದ್ದನ್ನು ಕಂಡವರಿದ್ದಾರೆ ಎನ್ನಲಾಗಿದೆ. ನಂತರ ಈಕೆ ನದಿ ತೀರದ ಕಾಲುದಾರಿಯಾಗಿ ಪಾವೂರು ಗಾಡಿಗದ್ದೆ ಕಡೆ ನಡೆದುಕೊಂಡು ಹೋಗಿರುವುದನ್ನೂ ಸ್ಥಳೀಯರು ಕಂಡಿದ್ದರು ಎಂದು ತಿಳಿದು ಬಂದಿದೆ.
ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ರಾತ್ರಿ 8.30 ರ ವೇಳೆಗೆ ಹರೇಕಳ ನೇತ್ರಾವತಿ ನದಿಯಲ್ಲಿ ತಾಯಿ ಮಗುವಿನ ಶವ ಪತ್ತೆಯಾಗಿದೆ. ಕೊಣಾಜೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಚೈತ್ರಾ ತನ್ನ ಸೊಂಟಕ್ಕೆ ಮಗುವನ್ನು ಕಟ್ಟಿ ಆತ್ಮಹತ್ಯೆಗೈದಿರುವುದು ಕಂಡು ಬಂದಿದೆ. ಮಗು ದಿಯಾಂಶ್ ಒಂದು ವರ್ಷದ ಹುಟ್ಟುಹಬ್ಬವನ್ನು ಆಶ್ರಮವೊಂದರಲ್ಲಿ ನಿನ್ನೆಯಷ್ಟೇ ಆಚರಿಸಿದ್ದರೆಂಬ ತಿಳಿದುಬಂದಿದೆ.