Visitors have accessed this post 677 times.

ಮನುಷ್ಯನ ಆಸೆಗಳಿಗೆ ಮಿತಿಯಿಲ್ಲ ಆದರೆ ಆಸೆಗಳನ್ನು ಪೂರೈಸಲು ಪಣತೊಟ್ಟು ಜೀವನವನ್ನು ಕೊನೆಗೊಳಿಸುವಂತಾಗಬಾರದು- ಮಹಮ್ಮದ್ ಅಸ್ಗರ್, ನ್ಯಾಯವಾದಿ

Visitors have accessed this post 677 times.

ಇಂದಿನ ಈ ಆಧುನಿಕ ಬದುಕಿನಲ್ಲಿ ಮನುಷ್ಯನಿಗೆ ಎಷ್ಟು ಸಂಪತ್ತಿದ್ದರೂ ಇಲ್ಲದಿದ್ದರೂ ಮತ್ತೂ ಗಳಿಸಬೇಕೆಂದು ಬಯಸುವುದು ಸಾಮಾನ್ಯ. ಆದರೆ ಅದು ಇಂದಿನ ಆಧುನಿಕ ಯಗದಲ್ಲಿ ಮನುಷ್ಯನನ್ನು ಅವನರಿಯದೇ ಬೇರೆ ದಾರಿಗೆ ಕೊಂಡೊಯ್ಯುತ್ತದೆ. ಇತ್ತೀಚೆಗೆ ತುಮಕೂರಿನಲ್ಲಿ ನಡೆದ ತ್ರಿವಳಿ ಕೊಲೆಯು ಇದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಮನುಷ್ಯ ಮನುಷ್ಯನನ್ನು ಯಾವ ರೀತಿ ಮೋಸದ ಜಾಲಕ್ಕೆ ಬೀಳಿಸುತ್ತಾನೆ ಎಂಬುದನ್ನು ಇಲ್ಲಿ ನಮಗೆ ಕಾಣಬಹುದು.
ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ಪರಿಚಯಮಾಡಿ ನನ್ನ ಹೊಲದಲ್ಲಿ ಉಳುಮೆ ಮಾಡುವ ಸಂದರ್ಭ ಚಿನ್ನದ ಗಣಿ / ನಿಧಿ ಸಿಕ್ಕಿಸುತ್ತದೆ ನನಗೆ ಹಣದ ಅವಶ್ಯಕತೆ ಇರುವುದರಿಂದ ಅದರ ಅರ್ಧ ವನ್ನು ಮಾರಲು ಇಚ್ಛಿಸಿರುತ್ತೇನೆ ನಿಮಗೆ ಬೇಕಾದರೆ ಕಡಿಮೆಗೆ ಒಳ್ಳೆಯ ರೇಟಿಗೆ ನೀಡುತ್ತೇನೆ ಎಂಬ ಆಮಿಷವೊಡ್ಡಿ ವೀಡಿಯೋ ಕಾಲ್ ಮೂಲಕ ಇವರನ್ನು ನಂಬಿಸುತ್ತಾರೆ ಆ ನಕಲಿ ಡೀಲರ್ ಗಳು. ಆದರೆ ಅದನ್ನು ತೆಗೆಯಲು ಸ್ವಲ್ಪ ಪೂಜೆ ಪುರಸ್ಕಾರ ಎಲ್ಲಾ ನಡೆಸಬೇಕು ಅದಕ್ಕೆ ಸ್ವಲ್ಪ ಖರ್ಚಾಗುತ್ತದೆ ಎಂದೆಲ್ಲಾ ಹೇಳಿ ಅಡ್ವಾನ್ಸ್ ಎಂದು ಸ್ವಲ್ಪ ಹಣ ಪಡೆದು ಹೀಗೆ ಸ್ವಲ್ಪ ಸ್ವಲ್ಪ ಹಣ ಪಡೆದು ವ್ಯವಹಾರ ಮುಂದುವರೆಯುತ್ತದೆ. ಕೊನೆಗೆ ಒಂದು ಸಲ ಹೀಗೆ ಚಿನ್ನ ಇರುವುದು ನಿಜವೇ ಎಂದು ತಿಳಿಯಲು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕೆಂದು ಹೋದಾಗ ಅವರು ಅವರು ಸ್ವಲ್ಪ ಚಿನ್ನವನ್ನು ತೋರಿಸಿ ಕೈಯಲ್ಲಿ ಮುಟ್ಟಲು ಬಿಡದೆ ಹಣದ ಬೇಡಿಕೆ ಇಡುತ್ತಾರೆ. ಹೀಗೆ ಮರಳಿದ ಈ ಮೂರು ಯುವಕರು ಇದರಿಂದ ಸಂಶಯಗೊಂಡು ತಾವು ಈಗಾಗಲೇ ನೀಡಿದ ಹಣವನ್ನು ಹಿಂದಿರುಗಿಸಬೇಕೆಂದು ಕೇಳಿಕೊಂಡಾಗ ಅವರು ಮತ್ತೇ ಖುದ್ದಾಗಿ ಬಂದು ಹಣ ಪಡೆಯಿರಿ ಅಥವಾ ಬಾಕಿಯಿರುವ ಹಣ ನೀಡಿ ಮಾಲ್ ಪಡೆಯಿರಿ ಎಂದು ಬೇಡಿಕೆ ಇಡುತ್ತಾರೆ. ಹೀಗೆ ಈ ಯುವಕರು ಅಲ್ಲಿಗೆ ಪುನಃ ಹೋದ ಸಂದರ್ಭದಲ್ಲಿ ಪೂರ್ವ ತಯಾರಿ ನಡೆಸಿ ಸನ್ನದ್ದರಾಗಿದ್ದ ನಕಲಿ ಡೀಲರ್ ಗಳು ಇವರನ್ನು ಮಾರಕಾಯುಧಗಳಿಂದ ಹಲ್ಲೆ ನಡೆಸಿ ಕೊಲೆಮಾಡಿ ಇವರು ಹೋದ ಕಾರಿನಲ್ಲೇ ಅವರ ಮೃತ ದೇಹವನ್ನು ಹಾಕಿ ಬರಡಾದ ಕೆರೆಯ ಹತ್ತಿರ ಕಾರನ್ನು ನಿಲ್ಲಿಸಿ ಬೆಂಕಿ ಕೊಟ್ಟು ಸುಟ್ಟು ಬಿಡುತ್ತಾರೆ. ಘಟನೆ ನಡೆದು ಸುಮಾರು 15 ದಿನಗಳ ನಂತರ ಇದು ಬೆಳಕಿಗೆ ಬರುತ್ತದೆ. ಮೃತರು ಬುದ್ಧಿ ವಂತರ ಜಿಲ್ಲೆಯವರು ಆದರೂ ಬುದ್ಧಿ ಹೀನ ವ್ಯವಹಾರ ನಡೆಸಲು ಹೋಗಿ ಜೀವ ಕಳೆದುಕೊಂಡು ಬಿಟ್ಟರು. ಅಪರಿಚಿತ ಕರೆಯೊಂದರಿಂದ ಶುರುವಾಗುವ ವ್ಯವಹಾರವು ಕೊನೆಗೆ ಕೊಲೆಯೊಂದಿಗೆ ಮುಕ್ತಾಯವಾಗುತ್ತದೆ.

ಈ ಘಟನೆಯು ಇಡೀ ಸಮಾಜವನ್ನು ಕಣ್ತೆರೆಸುವಂತೆ ಮಾಡಿದ ಒಂದು ಘಟಣೆಯಾದರೂ ಇಂತಹ ಘಟನೆಗಳು ಈ ಮೊದಲು ಕೂಡ ಹಲವರು ಎದುರಿಸಿ ಬಂದಿರುತ್ತಾರೆ. ಯಾರೂ ಕೂಡ ಇತರರೊಂದಿಗೆ ಹಂಚೆಕೊಂಡಿರುವುದಿಲ್ಲ ಕಾರಣವೇನೆಂದರೆ ಘನತೆ/ ಗೌರವ. ನಾನು ಹೀಗೆ ಮೋಸ ಹೋಗಿದ್ದೆ ಎಂದು ಯಾರಲ್ಲಾದರೂ ಹೇಳಿದರೆ ನನ್ನ ಮರ್ಯಾದೆ ಹೋಗಬಹುದು ಎಂಬ ಚಿಂತೆ. ಇಲ್ಲಿ ತನಗಾದ ಮೋಸದಿಂದ ಸಮಾಜದಲ್ಲಿ ಇತರರ ಕಣ್ತೆರೆಸುವ ಗೋಜಿಗೆ ಯಾವನೂ ಹೋಗುವುದಿಲ್ಲ.
ಸಹೋದರರೇ, ಆಲೋಚಿಸಿ ಈ ಒಂದು ವ್ಯವಹಾರದಲ್ಲಿ ಇಷ್ಟೊಂದು ಕೀಳು ಮಟ್ಟದಲಿ ಅಷ್ಟು ಸುಲಭವಾಗಿ ಅಮಾಯಕ ಜನರನ್ನು ಬಲಿಪಶು ಮಾಡಲಾಗುತ್ತದೆ ಎಂದು. ಇನ್ನೂ ಹಲವಾರು ರೀತಿಯಲ್ಲಿ ಅಮಾಯಕರನ್ನು ಕೆಲವು ವ್ಯವಹಾರಕ್ಕೆ ಆಹ್ವಾನಿಸಿ ಮೋಸದ ಬಲೆ ಬೀಸಲಾಗುತ್ತದೆ. ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಕಾಲ್ ಮೂಲಕ ಆರಂಭವಾಗುವ ಹನಿ ಟ್ರಾಪ್ ಪ್ರಕರಣಗಳು ಕೂಡ ಇದಕ್ಕೆ ಮತ್ತೊಂದು ಉದಾಹರಣೆಯಾಗಿದೆ. ನಮಗೆ ಗೊತ್ತಿಲ್ಲದ ನಂಬರ್ ಮೂಲಕ ಬರುವ ವೀಡಿಯೋ ಕಾಲ್ ಗಳನ್ನು ರಿಸಿವ್ ಮಾಡುವಾಗ ನಾವು ಎಚ್ಚರದಿಂದ ಇರಬೇಕಾಗಿದೆ. ಈ ಒಂದು ಕಾಲ್ ನಮ್ಮ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಲೆಂದೆ ಬರುವ ಕಾಲ್ ಆಗಿರುತ್ತದೆ. ಅಪ್ಪಿ ತಪ್ಪಿ ನಾವು ಏನಾದರೂ ವೀಡಿಯೋ ಕಾಲ್ ಗಳನ್ನು ರಿಸಿವ್ ಮಾಡಿದರೆ ಕ್ಷಣ ಮಾತ್ರದಲ್ಲೆ ನಮ್ಮ ಫೋಟೋವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ನಮಗೆ ಸೆಂಡ್ ಮಾಡಿ ಅದರ ಮೂಲಕ ನಮ್ಮನ್ನು ಹೆದರಿಸಿ ಪದೇ ಪದೇ ಹಣ ಲೂಟಿ ಮಾಡುವ ತಂತ್ರ ಅವರದ್ದಾಗಿರುತ್ತದೆ.

ಇನ್ನು ನಮ್ಮ ಮಹಿಳೆಯರು ಕೂಡ ಇಂತಹ ಮೋಸದ ಜಾಲಕ್ಕೆ ಬಲಿಪಶುಗಳಾಗುತ್ತಿದ್ದಾರೆ. ಮನೆಯಲ್ಲಿ ಕೂತು ಕೆಲಸ ಮಾಡಿ ಕೈ ತುಂಬಾ ಸಂಪಾದಿಸಿ ಎಂಬಿತ್ಯಾದಿ ಜಾಹಿರಾತುಗಳನ್ನು ನೋಡಿ ಅದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯದೆ ಅದಕ್ಕೆ ಸೇರಿ ಅದರಲ್ಲಿ ಸಂಬಳ ಬರಬೇಕಾದರೆ ಕೆಲವು ಷರತ್ತುಗಳನ್ನು ವಿಧಿಸಿ ನೀಡಿದ ಟಾಸ್ಕ್ ಗಳನ್ನು ಪೂರ್ತಿ ಗೊಳಿಸಬೇಕೆಂದು ಹೇಳಿ ಚೈನ್ ಬ್ಯುಸಿನಸ್ ನಂತೆ ನಮ್ಮ ಅಧೀನದಲ್ಲಿ ಜನರನ್ನು ಸೇರಿಸುತ್ತಾ ಹೋಗಬೇಕಾಗುತ್ತದೆ. ಇದರಲ್ಲಿ ವಿಧಿಸುವ ಷರತ್ತುಗಳನ್ನು ಪೂರೈಸಲು ಹೋಗಿ ತಮ್ಮ ಕೈಯಲ್ಲಿರುವ ಹಣವನ್ನು ಕಳೆದುಕೊಳ್ಳುವುದೇ ಹೆಚ್ಚು. ಇದು ನಿರುದ್ಯೋಗಿಯಾದ ಸುಲಭವಾಗಿ ಸಂಪಾದಿಸುವ ಮಾರ್ಗ ಹಿಡಿಯುವವರ ಅವಸ್ಥೆಯಾಗಿದೆ.

ಇತ್ತೀಚೆಗೆ ನಮ್ಮ ಕೆಲವು ಉದ್ಯೋಗಸ್ಥರು ಆನ್ ಲೈನ್ ಹೂಡಿಕೆ (investment) ಮೋರೆ ಹೋಗಿ ಹಣ ಕಳೆದುಕೊಂಡು ಪೇಚೆಗೆ ಸಿಲುಕುತ್ತಿರುವುದು ಕಂಡು ಬರುತ್ತಿದೆ. ಫೇಸ್ ಬುಕ್ , ಇನ್ಸ್ಟಾ ಗ್ರಾಮ್ ಗಳಲ್ಲಿ ಬರುವ ಕೆಲವು ಕಂಪೆನಿಯ ಹೂಡಿಕೆಯ ಜಾಹಿರಾತುಗಳನ್ನು ನೋಡಿ ಯುವ ಸಮೂಹವು ತಾವು ದುಡಿದದ್ದನ್ನು ಸ್ವಲ್ಪ ಮಟ್ಟಿಗೆ ಈ ರೀತಿ ಕೂಡಿಡುವ ಇದರಿಂದ ನಮ್ಮ ಭವಿಷ್ಯಕ್ಕೂ ,ಕಷ್ಟಕ್ಕೂ ಸಹಾಯ ಆಗಬಹುದೆಂದು ಹೂಡಿಕೆಯ ವ್ಯವಹಾರಕ್ಕೆ ಕೈ ಹಾಕುತ್ತಾರೆ. ಈ ಕಂಪೆನಿಗಳು ಮೊದ ಮೊದಲು ಕಾನೂನಾತ್ಮಕವಾಗಿ ವ್ಯವಹಾರ ನಡೆಸುವಂತೆ ನಟಿಸಿ ಹೂಡಿಕೆದಾರರು ನಂಬುವಂತೆ ದಾಖಲೆಗಳನ್ನು ನೀಡುತ್ತದೆ. ಹಾಗೆ ಹೊಡಿಕೆದಾರ ಹೂಡಿಕೆ ಮಾಡಿದ ಹಣದ ಸ್ವಲ್ಪ ಲಾಭಾಂಶವನ್ನು ಕೂಡ ಮೊದಲಿಗೆ ನೀಡುತ್ತದೆ. ಇದರಿಂದ ಹೂಡಿಕೆದಾರ ಇನ್ನೂ ಹೆಚ್ಚೆಚ್ಚು ಹೂಡಿಕೆ ಮಾಡಲು ಆರಂಭಿಸುತ್ತಾನೆ. ಅನೇಕರು ಸ್ನೇಹಿತರು ಬಂಧು ಬಳಗದವರಿಂದ ಸಾಲ ಮಾಡಿ ಹೂಡಿಕೆ ಮಾಡುತ್ತಾರೆ. ಆದರೆ ಯಾವುದೇ ಲಾಭಾಂಶ ಸಿಗುವುದಿಲ್ಲ. ಕೊನೆಗೆ ಒಂದು ದಿನ ಕಂಪೆನಿಯೊಂದಿಗೆ ಕೇಳಿದಾಗ ಅವರು ನಿಮ್ಮ ಹಣ ಇಂತಿಷ್ಟು ಆಗಿದೆ ಆದರೆ ನೀವು ಅದನ್ನು ಹಿಂಪಡೆಯಲು ಇಂತಿಷ್ಟು ತೆರಿಗೆ ಹಣ ಪಾವತಿಸಬೇಕೆಂದು ಹೇಳಿ, ಹೂಡಿಕೆದಾರ ಅದನ್ನು ಪಾವತಿಸಿದ ನಂತರವೂ ಯಾವುದೇ ಹಣವನ್ನು ಅವನಿಗೆ ನೀಡದೇ ಮತ್ತೆ ಮತ್ತೆ ಒಂದೊಂದು ಕಾರಣ ನೀಡಿ ಜನರಿಂದ ಲಕ್ಷಗಟ್ಟಲೆ ಹಣ ಪಡೆದು ವಂಚಿಸುವ ವ್ಯವಹಾರವಾಗಿದೆ ಇದು. ಇದರಲ್ಲಿ ಅನೇಕ ಮಹಿಳೆಯರೂ ಕೂಡ ಹಣವನ್ನು ಕಳೆದುಕೊಂಡಿದ್ದಾರೆ.

ಈ ಎಲ್ಲಾ ಪ್ರಕರಣಗಳಲ್ಲಿ ಹಲವಾರು ಜನರು ತಮ್ಮ ಹಣದ ಜೊತೆಗೆ ಜೀವವನ್ನು ಕಳೆದುಕೊಳ್ಳುತ್ತಿರುವುದು ಹೆಚ್ಚಾಗುತ್ತಿದೆ.

Leave a Reply

Your email address will not be published. Required fields are marked *