Visitors have accessed this post 257 times.
ಕಾಸರಗೋಡು: ನಿದ್ರಿಸುತ್ತಿದ್ದ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಸಿಬ್ಬಂದಿಗಳ ಪೆಟ್ಟಿಗೆಯಿಂದ ಪ್ರಯಾಣದ ಕಲೆಕ್ಷನ್ ಮೊತ್ತವಾದ 11,112 ರೂ. ಹಣವನ್ನು ಕಳವುಗೈದ ಘಟನೆ ಗಡಿಭಾಗದ ಕಾಸರಗೋಡು ಜಿಲ್ಲೆಯ ಉಪ್ಪಳದಲ್ಲಿ ನಡೆದಿದೆ.
ಉಪ್ಪಳ – ಪುತ್ತೂರು ಮಧ್ಯೆ ಸಂಚರಿಸುವ ಬಿ.ಸಿ.ರೋಡ್ ಡಿಪ್ಪೋದ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಇದಾಗಿದೆ. ಭಾನುವಾರ ರಾತ್ರಿ 7.45ಕ್ಕೆ ಟ್ರಿಪ್ ಮುಗಿಸಿ ಉಪ್ಪಳ ರೈಲ್ವೆ ನಿಲ್ದಾಣ ಬಳಿಯಿರುವ ಶ್ರೀ ಅಯ್ಯಪ್ಪ ಮಂದಿರ ಪರಿಸರದಲ್ಲಿ ಎಂದಿನಂತೆ ಬಸ್‌ನ್ನು ನಿಲ್ಲಿಸಿ ನಿರ್ವಾಹಕ ಮಲ್ಲಿಕಾರ್ಜುನ ಹನ್ಸಾಲಿ ಹಾಗೂ ಚಾಲಕ ಪ್ರಶಾಂತ್ ಅವರು ಮಂದಿರದ ಹಾಲ್ ಬಳಿಯ ಶೆಡ್‌ನಲ್ಲಿ ನಿದ್ರಿಸುತ್ತಿದ್ದರು. ಈ ವೇಳೆ ಪ್ರಯಾಣದ ಕಲೆಕ್ಷನ್ ಹಣ, ಟಿಕೆಟ್, ಇತರ ದಾಖಲೆ ಪತ್ರಗಳನ್ನು ಮರದ ಪೆಟ್ಟಿಗೆಯಲ್ಲಿರಿಸಿ ಬೀಗ ಹಾಕಿದ್ದರು. ಆದರೆ ಸೋಮವಾರ ಮುಂಜಾನೆ ಎದ್ದು ನೋಡುವಾಗ ಪೆಟ್ಟಿಗೆ ಅಲ್ಪದೂರದಲ್ಲಿ ಬೀಗ ಮುರಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅದರಲ್ಲಿರಿಸಿದ ಹಣ ಮಾತ್ರ ಕಳ್ಳತನವಾಗಿದೆ. ಈ ಬಗ್ಗೆ ನಿರ್ವಾಹಕ ಮಲ್ಲಿಕಾರ್ಜುನ ಹನ್ಸಾಲಿ ಅವರು ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ. ಸೋಮವಾರ ಸಂಜೆ ಪೊಲೀಸರು ಮಂದಿರದ ಸಿಸಿ ಟಿವಿ ಕ್ಯಾಮರಾವನ್ನು ತಪಾಸಣೆಗೊಳಿಸಿದ್ದು, ಈ ವೇಳೆ ಓರ್ವ ವ್ಯಕ್ತಿ ಮುಂಜಾನೆ 4ರ ಹೊತ್ತಿಗೆ ಹಾದುಹೋಗುತ್ತಿರುವ ದೃಶ್ಯ ಕಂಡುಬಂದಿದೆ. ಆದರೆ ಗುರುತು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲವೆನ್ನಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.