
ಹಾಸನ: ಅಶ್ಲೀಲ ವಿಡಿಯೋ ವೈರಲ್ ಆದ ಪ್ರಕರಣ ಹಾಗೂ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಎದುರಿಸುತ್ತಿರುವ ಆರೋಪಿ ಪ್ರಜ್ವಲ್ ರೇವಣ್ಣ ಅವರಿಗೆ ಹೀನಾಯ ಸೋಲಾಗಿದ್ದು, ಹಾಸನ ಮತದಾರರು ಕಾಂಗ್ರೆಸ್ ಅಭ್ಯರ್ಥಿಯ ಕೈ ಹಿಡಿದಿದ್ದು, 20 ವರ್ಷದ ಬಳಿಕ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿದೆ. ಹಾಸನದ ಲೋಕಸಭಾ ಚುನಾವಣೆಯ ಮತ ಎಣಿಕೆಯಲ್ಲಿ ಆರಂಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದರು. ಆಮೇಲೆ ಜೆಡಿಎಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದ ಪ್ರಜ್ವಲ್ ರೇವಣ್ಣ ಅವರು ತೀವ್ರ ಪೈಪೋಟಿ ನೀಡಿದ್ದರು. ಆದರೆ ಮುಂದಿನ ಹಂತದ ಮತಎಣಿಕೆಯಲ್ಲಿ ಪ್ರಜ್ವಲ್ ರೇವಣ್ಣ ಅವರು ಸತತ ಹಿನ್ನೆಡೆ ಅನುಭವಿಸಿ ತೀವ್ರ ಮುಖಭಂಗ ಅನುಭವಿಸಿದ್ದಾರೆ. ಹಾಸನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರ ಭರ್ಜರಿ ಜಯ ಸಾಧಿಸಿದ್ದು, ಅಧಿಕೃತ ಘೋಷಣೆ ಒಂದೇ ಬಾಕಿ ಉಳಿದಿದೆ. 16ನೇ ಸುತ್ತಿನ ಮತ ಎಣಿಕೆ ಮುಕ್ತಾಯವಾದಾಗ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರು 4 ಲಕ್ಷ 2 ಸಾವಿರ 261 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.


