ಮದುವೆ ಹೆಸರಲ್ಲಿ ಇನ್ನೂ ಪ್ರಬುದ್ಧತೆಗೆ ಬಾರದ ಹೆಣ್ಮಕ್ಕಳನ್ನು ಬಲಿಕೊಡೋದು ಭಾರತ ಮಾತ್ರವಲ್ಲದೇ ಜಗತ್ತಿನ ಅನೇಕ ದೇಶಗಳಲ್ಲಿ ಕಂಡು ಬರುತ್ತದೆ. ಬಾಲ್ಯ ವಿವಾಹ ಮಾಡಿ ಹೆಣ್ಮಕ್ಕಳ ಬದುಕನ್ನು ಸರ್ವನಾಶ ಮಾಡುವ ಕೃತ್ಯವೂ ಆಗಾಗ ಬೆಳಕಿಗೆ ಬರುತ್ತದೆ.
ಇದೀಗ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿಯೂ ಇಂತಹದ್ದೇ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿ ಪಾಪಿ ತಂದೆಯೊಬ್ಬ ತನ್ನ 12 ವರ್ಷದ ಮಗಳನ್ನು 72 ವರ್ಷದ ವ್ಯಕ್ತಿಗೆ ಮಾರಾಟ ಮಾಡಿ ಮದುವೆ ಮಾಡಲು ಯತ್ನಿಸಿದ್ದಾನೆ. ಆದರೆ ಇದರ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆ ಮದುವೆಯನ್ನು ನಿಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ 72ರ ಮುದುಕನನ್ನು ಪೊಲೀಸರು ಬಂಧಿಸಿದ್ದಾರೆ.
ಅಂದ ಹಾಗೆ ಅಪ್ರಾಪ್ತ ಬಾಲಕಿಯ ತಂದೆಯ ಹೆಸರು ಆಲಂ ಸೈಯದ್. ಈ ಸಂಬಂಧ ಬಾಲಕಿಯ ತಂದೆ ಸೈಯದ್ ತನ್ನ ಮಗಳನ್ನು ಐದು ಲಕ್ಷಕ್ಕೆ ಮಾರಾಟ ಮಾಡಲು ಒಪ್ಪಂದ ಮಾಡಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮದುವೆಗೆ ಮುನ್ನ ಇಷ್ಟು ಹಣ ಸಿಗದಿದ್ದರೆ ಮದುವೆ ಮಾಡಿಕೊಡುವುದಿಲ್ಲ ಎಂದು ಸೈಯದ್ ಹೇಳಿದ್ದಾನೆ. ಪೊಲೀಸರು ಮಧ್ಯ ಪ್ರವೇಶಿಸಿ ಮದುವೆಗೂ ಮುನ್ನ ತಡೆದಿದ್ದಾರೆ. ಇದಲ್ಲದೆ, ಬಾಲಕಿಯನ್ನು ಮದುವೆಯಾಗಲು ಹೊರಟಿದ್ದ ಮುದುಕ ವರ ಹಬೀಬ್ ಖಾನ್ ಮತ್ತು ‘ನಿಕಾಹ್ ಖಾವಾನ್ (ಮದುವೆ ನಡೆಸುವವರು) ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಬಾಲಕಿಯ ತಂದೆ ಪರಾರಿ
ಈ ಪ್ರಕರಣಕ್ಕೆ ಪೊಲೀಸರು ಎಂಟ್ರಿಯಾಗುತ್ತಿದ್ದಂತೆ ಬಾಲಕಿಯ ತಂದೆ ಸೈಯದ್ ಸ್ಥಳದಿಂದ ಪರಾರಿಯಾಗಿದ್ದಾನೆ. ಸದ್ಯ ಪೊಲೀಸರಿಂದ ಬಾಲಕಿ ತಂದೆ, ವರ ಮತ್ತು ನಿಕಾಹ್ ಖಾವಾನ್ ವಿರುದ್ಧ ವಿವಾಹ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಪಾಕಿಸ್ತಾನದಲ್ಲಿ ಬಾಲ್ಯವಿವಾಹದ ವಿರುದ್ಧ ಕಾನೂನು ಜಾರಿಯಾದ ನಂತರವೂ ಇಂತಹ ಘಟನೆಗಳು ನಡೆಯುತ್ತಲೇ ಇರುವುದು ಗಮನಾರ್ಹ. ಈ ಹಿಂದೆ ಪಾಕಿಸ್ತಾನದ ರಾಜನ್‌ಪುರ ಮತ್ತು ಥಟ್ಟಾದಲ್ಲಿ ಇಂತಹ ಘಟನೆಗಳು ನಡೆದಿದ್ದವು. ಪೊಲೀಸರು ಸ್ಥಳಕ್ಕಾಗಮಿಸಿ ತಡೆದಿದ್ದರು.
ಇತ್ತೀಚೆಗೆ ಮತ್ತೊಂದು ಪ್ರಕರಣ ಬೆಳಕಿಗೆ
ಈ ಹಿಂದೆಯೂ ಪಾಕಿಸ್ತಾನದಲ್ಲಿ ಇಂತಹದ್ದೇ ಪ್ರಕರಣ ಬೆಳಕಿಗೆ ಬಂದಿತ್ತು. ಪಂಜಾಬ್‌ನ ರಾಜನ್‌ಪುರದಲ್ಲಿ 11 ವರ್ಷದ ಬಾಲಕಿಯನ್ನು 40 ವರ್ಷದ ವ್ಯಕ್ತಿಯೊಂದಿಗೆ ವಿವಾಹ ಮಾಡಿಕೊಡುತ್ತಿದ್ದ ಅಪ್ರಾಪ್ತರ ವಿವಾಹವನ್ನು ಪೊಲೀಸರು ನಿಲ್ಲಿಸಿದ್ದರು. ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ಬಂಧಿಸಿದ್ದರು.
ಇದಲ್ಲದೆ, ಮೇ 6 ರಂದು ಸ್ವಾತ್‌ನಲ್ಲಿ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಿದ್ದಕ್ಕಾಗಿ 70 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.