Visitors have accessed this post 230 times.
ಉಪ್ಪಿನಂಗಡಿ : ಸಮೀಪದ ಪೆರ್ನೆ ಗ್ರಾಮದ ಬಿಳಿಯೂರಿನ ದರ್ಖಾಸು ನಿವಾಸಿ ಹೇಮಾವತಿ (37) ಎಂಬವರು ರವಿವಾರ ತಡರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಇದೀಗ ಮೃತ ಮಹಿಳೆಯ ಸಂಬಂಧಿ ಎಸ್ಎಸ್ಎಲ್‌ಸಿ ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ. ಹೇಮಾವತಿ ಅವರ ಮನೆಗೆ ಬಂದಿದ್ದ ಅವರ ಸಹೋದರಿಯ ಪುತ್ರ, ಎಸ್ಎಸ್ಎಲ್‌ಸಿ ವಿದ್ಯಾರ್ಥಿ ರವಿವಾರ ರಾತ್ರಿ ತಂಗಿದ್ದ. ತಡರಾತ್ರಿ ವೇಳೆ ಈ ಅಪ್ರಾಪ್ತ ಹೇಮಾವತಿ ಮಲಗಿದಲ್ಲಿಗೆ ಹೋಗಿ ದೇಹಸುಖ ಬಯಸಿದ್ದಾನೆ. ಇದಕ್ಕೆ ಹೇಮಾವತಿ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ಆರೋಪಿ ಬಾಲಕ ಅವರ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ತನಿಖೆ ವೇಳೆ ಬಾಲಕ ಬಾಯಿ ಬಿಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಘಟನೆ ಬಗ್ಗೆ ಹೇಮಾವತಿಯವರ ಪತಿ ವಿಠಲ ಪೈ ಉಪ್ಪಿನಂಗಡಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. “ನನ್ನ ಪತ್ನಿ ಹೇಮಾವತಿ ಆಕೆಯ ತವರು ಮನೆಯಲ್ಲಿ ವಾಸ್ತವ್ಯವಿದ್ದಾಳೆ. ಆಕೆ ಮಲಗಿದಲ್ಲಿಯೇ ಮೃತಪಟ್ಟಿದ್ದಾಳೆ ಎಂದು ತನಗೆ ಮಾಹಿತಿ ಬಂದಿತ್ತು. ಆದರೆ ಪತ್ನಿಯ ಮೃತ ದೇಹದಲ್ಲಿ ಗಾಯದ ಗುರುತು ಬಗ್ಗೆ ಸಂಶಯ ಬಂದಿರುತ್ತದೆ. ಜೂನ್ 16ರಂದು ರಾತ್ರಿ ಪತ್ನಿಯ ಸಹೋದರಿಯ ಪುತ್ರ ಪತ್ನಿಯ ಮನೆಗೆ ಬಂದಿದ್ದಾನೆ. ರಾತ್ರಿ ಪತ್ನಿಯ ತಾಯಿ, ಪತ್ನಿಯ ಸಹೋದರಿಯ ಪುತ್ರ ಮತ್ತು ಪತ್ನಿ ಊಟ ಮಾಡಿ ಮಲಗಿದ್ದಾರೆ. ಆ ಬಳಿಕ ರಾತ್ರಿಯಿಂದ ಜೂನ್ 17ರ ಬೆಳಗ್ಗಿನ ಜಾವದ ಮಧ್ಯದ ಅವಧಿಯಲ್ಲಿ ಪತ್ನಿಯ ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆಗೈದಿರುವ ಅನುಮಾನ ಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದರು. ಮೃತ ಹೇಮಾವತಿಯವರ ಪತಿ ವಿಠಲ ಪೈ ಅವರ ದೂರಿನನ್ವಯ ಆರೋಪಿ ಬಾಲಕನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆಗ ಆತ ತಾನೇ ಕೊಲೆ ಮಾಡಿರುವುದು ಒಪ್ಪಿಕೊಂಡಿದ್ದಾನೆ. ಹೀಗಾಗಿ ಅಪ್ರಾಪ್ತ ಬಾಲಕನನ್ನು ಬಂಧಿಸಿ ಆತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪ್ರಕರಣದ ತನಿಖಾಧಿಕಾರಿ ಉಪ್ಪಿನಂಗಡಿ ಗ್ರಾಮಾಂತರ ಪೊಲೀಸ್ ಇನ್ಸ್‌ಪೆಕ್ಟರ್ ರವಿ ಬಿ.ಎಸ್. ತಿಳಿಸಿದ್ದಾರೆ.