
ಕಾರ್ಕಳ: ದೇವಸ್ಥಾನಕ್ಕೆ ಹೋಗುತ್ತಿದ್ದ ವೇಳೆ ಬೈಕ್ ಡಿಕ್ಕಿಯಾದ ಪರಿಣಾಮ ವಿದ್ಯಾರ್ಥಿನಿ ಪ್ರಣಮ್ಯ ಶೆಟ್ಟಿ (14) ಮೃತಪಟ್ಟ ಘಟನೆ ನಂದಳಿಕೆಯಲ್ಲಿ ಸಂಭವಿಸಿದೆ. ಹತ್ತನೇ ತರಗತಿಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿ ಸ್ಥಳೀಯ ಲಕ್ಷ್ಮೀ ಜನಾರ್ದನ ದೇವಸ್ಥಾನಕ್ಕೆಂದು ಮನೆಯಿಂದ ಹೊರಟ ಸ್ವಲ್ಪ ಸಮಯದಲ್ಲಿಯೇ ಬೈಕ್ ಡಿಕ್ಕಿಯಾಗಿದೆ. ಬೈಕ್ ಸವಾರ ರಸ್ತೆಯಿಂದ ತೀರಾ ಎಡಬದಿಗೆ ಬಂದು ಪ್ರಣಮ್ಯ ಅವರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದ. ತಲೆಯ ಭಾಗದಲ್ಲಿ ಗಂಭೀರ ಗಾಯಗೊಂಡ ಆಕೆಯನ್ನು ಕೂಡಲೇ ಕಾರ್ಕಳದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಬೈಕ್ ಸವಾರನ ಅಜಾಗರೂಕತೆಯ ಚಾಲನೆಯ ಪರಿಣಾಮ ಈ ಘಟನೆ ನಡೆದಿದೆ ಎಂದು ದೂರು ದಾಖಲಾಗಿದೆ.ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


