ಕಾಸರಗೋಡು: ಗೂಗಲ್ ಮ್ಯಾಪ್ ಆಧರಿಸಿಕೊಂಡು ಪ್ರಯಾಣಿಸುತ್ತಿದ್ದಾಗ ಕಾರೊಂದು ಹೊಳೆಗೆ ಬಿದ್ದ ಘಟನೆ ನಡೆದಿದೆ. ಕಾರು ನೀರಿನಲ್ಲಿ ಕೊಚ್ಚಿ ಹೋದ ಘಟನೆ ಕುತ್ತಿಕೋಲ್ ಸಮೀಪ ನಡೆದಿದೆ. ಕಾರಿನಲ್ಲಿದ್ದ ಇಬ್ಬರು ಅಪಾಯದಿಂದ ಪಾರಾಗಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಕುತ್ತಿಕೋಲ್ ಪಳ್ಳಂಜಿಯಲ್ಲಿ ಸೇತುವೆ ಮೂಲಕ ತೆರಳುತ್ತಿದ್ದಾಗ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಕಾರಿನಲ್ಲಿದ್ದ ಅಂಬಲತ್ತರದ ತಸ್ರಿಫ್ ( 36) ಅಬ್ದುಲ್ ರಶೀದ್ ( 38) ರನ್ನು ಸ್ಥಳೀಯರು ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಮೇಲಕ್ಕೆತ್ತಿ ರಕ್ಷಿಸಿದ್ದಾರೆ.
ಗುರುವಾರ ಬೆಳಿಗ್ಗೆ ಅರಣ್ಯ ಪ್ರದೇಶದ ಪಳ್ಳಂಜಿ- ಪಾಂಡಿ ರಸ್ತೆಯ ತಡೆಗೋಡೆ ಇಲ್ಲದ ಸೇತುವೆ ಮೂಲಕ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಇಬ್ಬರೂ ಉಪ್ಪಿನಂಗಡಿಗೆ ತೆರಳುತ್ತಿದ್ದರು. ಗೂಗಲ್ ಮ್ಯಾಪ್ ಮೂಲಕ ಇವರು ಕಾರಿನಲ್ಲಿ ಸಂಚರಿಸುತ್ತಿದ್ದರು.
ಹೊಳೆಯಲ್ಲಿ ಸೇತುವೆ ಮೇಲಿಂದ ನೀರು ಹರಿದು ಹೋಗುತ್ತಿತ್ತು. ಸೇತುವೆಗೆ ತಡೆಗೋಡೆ ಇಲ್ಲದಿರುವುದನ್ನು ಅರಿಯದೆ ಇವರು ಮುಂದಕ್ಕೆ ಸಾಗುತ್ತಿದ್ದಾಗ ನಿಯಂತ್ರಣ ತಪ್ಪಿದ ಕಾರು ಹೊಳೆಗೆ ಬಿದ್ದು ಕೊಚ್ಚಿಕೊಂಡು ಹೋಗಿದ್ದು , ಅಲ್ಪ ದೂರಕ್ಕೆ ಸಾಗಿ ಬದಿಯ ಮರಕ್ಕೆ ಬಡಿದು ನಿಂತಿದೆ.
ಇಬ್ಬರೂ ಕಾರಿನಿಂದ ಹೊರಬಂದು ಮರಕ್ಕೆ ಹಿಡಿದು ನಿಂತಿದ್ದರು. ಸ್ಥಳೀಯರು ಗಮನಿಸಿ ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು ಇಬ್ಬರನ್ನು ರಕ್ಷಿಸಲಾಗಿದೆ.