ಉತ್ತರಪ್ರದೇಶ: ಉತ್ತರ ಪ್ರದೇಶದ ಉನ್ನಾವೊದಲ್ಲಿ ಲಕ್ನೋ-ಆಗ್ರಾ ಎಕ್ಸ್‌ಪ್ರೆಸ್‌ವೇಯಲ್ಲಿ ಬುಧವಾರ ಬೆಳಗ್ಗೆ ಸ್ಲೀಪರ್ ಬಸ್ ಹಾಲಿನ ಟ್ಯಾಂಕರ್‌ಗೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ. 18 ಜನರು ಸಾವನ್ನಪ್ಪಿದ್ದಾರೆ ಮತ್ತು 15 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಬಸ್ ಬಿಹಾರದ ಸೀತಾರ್ಮಹಿಯಿಂದ ದೆಹಲಿ ಕಡೆ ತೆರಳುತ್ತಿತ್ತು. ಈ ವೇಳೆ ಗರ್ಹಾ ಗ್ರಾಮದ ಬಳಿ ಹಾಲಿನ ಟ್ಯಾಂಕರ್‌ಗೆ ಹಿಂದಿನಿಂದ ಹೋಗಿ ಡಿಕ್ಕಿ ಹೊಡೆದಿದೆ. ಬಿಹಾರದಿಂದ ದೆಹಲಿಗೆ ತೆರಳುತ್ತಿದ್ದ ಬಸ್ಸೊಂದು ಓವರ್‌ಟೇಕ್ ಮಾಡುವ ಯತ್ನದಲ್ಲಿ ಟ್ಯಾಂಕರ್‌ಗೆ ಡಿಕ್ಕಿ ಹೊಡೆದು ಬಸ್ ಪಲ್ಟಿಯಾಗಿದೆ.
ಬಸ್ ಡಿಕ್ಕಿ ಹೊಡೆದಂತೆ ಸಂಪೂರ್ಣ ನಜ್ಜುಗುಜ್ಜಾಗಿದೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯ ಪೊಲೀಸರು ಮತ್ತು ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಸಂತ್ರಸ್ತರನ್ನು ಹೊರತೆಗೆದಿದ್ದಾರೆ.ಎಲ್ಲಾ ಗಾಯಗೊಂಡ ವ್ಯಕ್ತಿಗಳನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ, 17 ರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ. ಮೃತರ ಗುರುತು ಇನ್ನೂ ದೃಢಪಟ್ಟಿಲ್ಲ. ಸ್ಥಳೀಯ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
ಭೀಕರ ಅಪಘಾತಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಂತಾಪ ಸೂಚಿಸಿದ್ದಾರೆ ”ದುಃಖದಲ್ಲಿರುವ ಕುಟುಂಬಳಿಗೆ ಸಂತಾಪ ಸೂಚಿಸುತ್ತಿದ್ದೇನೆ. ಜಿಲ್ಲಾಧಿಕಾರಿಯೊಂದಿಗೆ ಪರಿಸ್ಥಿತಿ ಬಗ್ಗೆ ತಿಳಿದುಕೊಂಡಿದ್ದೇನೆ” ಎಂದು ಹೇಳಿದ್ದಾರೆ.