Visitors have accessed this post 168 times.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ನಿರೀಕ್ಷೆಗೂ ಮೀರಿ ಮಳೆಯಾಗುತ್ತಿದ್ದು ಅಪಾರ ಪ್ರಮಾಣದ ಸೊತ್ತು ನಷ್ಟ ಉಂಟಾಗಿದೆ. ಜಿಲ್ಲೆಯ ಜನತೆ ಮತ್ತೆ ಬದುಕು ಕಟ್ಟಿಕೊಳ್ಳಲು ಅನುವಾಗುವಂತೆ ರಾಜ್ಯ ಸರಕಾರ 300 ಕೋಟಿ ರೂ. ವಿಶೇಷ ಪರಿಹಾರ ಘೋಷಣೆ ಮಾಡಬೇಕೆಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಪತ್ರಿಕಾಗೋಷ್ಟಿಯಲ್ಲಿ ಒತ್ತಾಯಿಸಿದರು.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿರಂತರ ಮಳೆಯಿಂದಾಗಿ ಹಲವು ಮನೆಗಳು ಕುಸಿದಿದ್ದು ಮನೆಗಳ ಮೇಲೆ ಮರಗಳು ಉರುಳಿಬಿದ್ದು ಸುಮಾರು 300 ಕೋಟಿಗೂ ಅಧಿಕ ಹಾನಿ ಉಂಟಾಗಿದೆ. ಜಿಲ್ಲೆಯಲ್ಲಿ ಮನೆಹಾನಿ, ಕೃಷಿ ಹಾನಿ ವ್ಯಾಪಾಕವಾಗಿದ್ದು ಮುಖ್ಯಮಂತ್ರಿ ಅವರು ತಕ್ಷಣವೇ ಈ ಬಗ್ಗೆ ಕ್ರಮ ಕೈಗೊಂಡು ಪರಿಹಾರ ಒದಗಿಸಬೇಕು ಎಂದು ಹೇಳಿದರು.
ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಪೂರ್ಣ ಮನೆ ಹಾನಿಯಾಗಿದ್ದರೆ 5 ಲಕ್ಷ, ಭಾಗಶ ಹಾನಿಯಾಗಿದ್ದರೆ 2.50 ಲಕ್ಷ, ನೀರು ನುಗ್ಗಿದ್ದರೆ 10000 ಪರಿಹಾರ ಘೋಷಿಸಿದ್ದರು. ಈಗಿನ ಸರಕಾರ ದಿವಾಳಿಯಾಗಿದ್ದು ಸರಕಾರದ ಪರಿಹಾರ ಕೊಡಲು ವಿಫಲವಾದರೆ ಕೊನೆಪಕ್ಷ ಎನ್ ಡಿಆರ್ ಎಫ್ ವತಿಯಿಂದ ನೀಡಲಾಗುವ ಪರಿಹಾರ ಆದ್ರೂ ಕೊಡಿ ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಲ್ಲಿಯವರೆಗೆ ಜಿಲ್ಲೆಗೆ ಭೇಟಿ ಕೊಟ್ಟಿಲ್ಲ. ಮೂಡ ಭ್ರಷ್ಟಾಚಾರದಲ್ಲಿ ಮುಳುಗಿರುವ ಅವರು ಕುರ್ಚಿ ಉಳಿಸಿಕೊಳ್ಳುವಲ್ಲಿ ನಿರತರಾಗಿದ್ದಾರೆ. ಸರಕಾರ ಎಲ್ಲ ರೀತಿಯಲ್ಲೂ ಸಂಪೂರ್ಣ ವಿಫಲವಾಗಿದೆ ಎಂದರು.
ಡೆಂಗ್ಯೂ ರೋಗ ಪೀಡಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು ಜಿಲ್ಲೆಯಲ್ಲಿ ಎಷ್ಟು ಪ್ರಕರಣ ಇದೆ ಎನ್ನುವುದೇ ತಿಳಿಯುತ್ತಿಲ್ಲ. ರಾಜ್ಯ ಸರಕಾರ, ಆರೋಗ್ಯ ಇಲಾಖೆ ಸಂಪೂರ್ಣ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ ಎಂದು ಟೀಕಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಬಿಜೆಪಿ ಮುಖಂಡರಾದ ರಮೇಶ್ ಕಂಡೆಟ್ಟು, ನಿತಿನ್ ಕುಮಾರ್, ರವಿಶಂಕರ್ ಮಿಜಾರ್, ಸಂಜಯ್ ಪ್ರಭು, ಪೂರ್ಣಿಮಾ, ರಮೇಶ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.