ಮಂಗಳೂರು : ನಗರದ ಬೀದಿ ಬದಿ ವ್ಯಾಪಾರಿಗಳನ್ನು ತೆರವು ಮಾಡುವ ಬಿಜೆಪಿ ಆಡಳಿತದ ಮಂಗಳೂರು ಮಹಾನಗರ ಪಾಲಿಕೆಯ ಟೈಗರ್ ಕಾರ್ಯಾಚರಣೆ ಅನ್ಯಾಯ ಮತ್ತು ತಾರತಮ್ಯದಿಂದ ಕೂಡಿದೆ. ಕೂಡಲೆ ಟೈಗರ್ ಕಾರ್ಯಾಚರಣೆ ಸ್ಥಗಿತಗೊಳಿಸಿ ಬೀದಿ ಪಾಲಾಗಿರುವ ಬೀದಿ ಬದಿ ವ್ಯಾಪಾರಿಗಳಿಗೆ ಮಹಾನಗರ ಪಾಲಿಕೆ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು.
ಮಹಾನಗರ ಪಾಲಿಕೆ ವ್ಯಾಪ್ತಿಯ ಬೀದಿ ಬದಿ ವ್ಯಾಪಾರಿಗಳಿಗೆ ಬದಲಿ ವ್ಯವಸ್ಥೆ ಮಾಡದೆ ಅವರ ಸೊತ್ತುಗಳನ್ನು ಜೆಸಿಬಿ ಬಳಸಿ ಧ್ವಂಸ ಮಾಡಿ ತೆರವು ಮಾಡಿರುವ ಪಾಲಿಕೆಯ ಕಾರ್ಯಾಚರಣೆ ಅನ್ಯಾಯ ಮತ್ತು ಅಮಾನವೀಯ. ಬೀದಿ ಬದಿ ವ್ಯಪಾರದ ಕುರಿತು ಸರಕಾರಗಳೆ ರೂಪಿಸಿರುವ ನಿಯಮಗಳನ್ನು ಉಲ್ಲಂಘಿಸಿ ಪಾಲಿಕೆಯ ಬಿಜೆಪಿ ಆಡಳಿತ ಬಡವರ ಹೊಟ್ಟೆಗೆ ಹೊಡೆಯುವ ಪಾಪದ ಕೆಲಸ ಮಾಡಿದೆ. ದೇಶದ ಎಲ್ಲಾ ಮಹಾ ನಗರಗಳಲ್ಲೂ ಬೀದಿ ಬದಿ ವ್ಯಾಪಾರ ಇದೆ. ಮಂಗಳೂರು ನಗರದಲ್ಲೂ ಬೀದಿ ಬದಿ ವ್ಯಾಪಾರವನ್ನು ಅವಲಂಬಿಸಿರುವ ಬಡ ವ್ಯಾಪಾರಿಗಳು ಹಾಗೂ ಖರೀದಿದಾರರಾದ ಕಡಿಮೆ ಆದಾಯದ ಜನರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಅವರ ಹಿತಾಸಕ್ತಿಗಳನ್ನೂ ಕಾಪಾಡುವುದು, ಅವರ ಪರವಾಗಿ ನಿಲ್ಲುವುದೂ ಸಹ ಆಡಳಿತದ ಜವಾಬ್ದಾರಿಯಾಗಿದೆ. ಟೈಗರ್ ಕಾರ್ಯಾಚರಣೆ ಬಿಜೆಪಿ ಆಡಳಿತದ ನಗರ ಪಾಲಿಕೆಯ ಬಡವರ ವಿರೋಧಿ ಮನಸ್ಥಿತಿಯ ದ್ಯೋತಕವಾಗಿದೆ.