Visitors have accessed this post 150 times.
ಮಂಗಳೂರು: “ಸಹಕಾರಿ ಪಿತಾಮಹ” ದಿ.ಮೊಳಹಳ್ಳಿ ಶಿವರಾಯರ 144ನೇ ಜನ್ಮ ದಿನಾಚರಣೆಯು ಆದಿತ್ಯವಾರ ಎಸ್ ಸಿಡಿಸಿಸಿ ಬ್ಯಾಂಕ್ ನಲ್ಲಿ ಜರುಗಿತು.
“ಸಹಕಾರ ರತ್ನ“ ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅಧ್ಯಕ್ಷತೆಯನ್ನು ವಹಿಸಿದ್ದರು.
ಮೊಳಹಳ್ಳಿ ಶಿವರಾಯರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟಿಸಲಾಯಿತು. ಬಳಿಕ ಮಾತಾಡಿ, “ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ಇಷ್ಟು ಎತ್ತರಕ್ಕೆ ಬೆಳೆಯಲು ಮೊಳಹಳ್ಳಿ ಶಿವರಾಯರ ದೂರದರ್ಶಿತ್ವ ಕಾರಣ. ಅವರು ತಮ್ಮ ಹುಟ್ಟೂರಿನಲ್ಲಿ ಸ್ಥಾಪನೆ ಮಾಡಿದ ಸಹಕಾರಿ ಕ್ಷೇತ್ರ ಇಂದು ರಾಜ್ಯದಗಲಕ್ಕೆ ವಿಸ್ತರಿಸಿದೆ. ಆ ಕಾಲದಲ್ಲಿ ಎತ್ತಿನ ಗಾಡಿಯಲ್ಲಿ ಸುತ್ತಾಡಿ ಸಹಕಾರಿ ಕ್ಷೇತ್ರವನ್ನು ಎಲ್ಲೆಡೆ ವಿಸ್ತರಿಸಿದ್ದಾರೆ. ಇದರ ಫಲವಾಗಿ ಜಿಲ್ಲೆಯ ಸಹಕಾರಿ ಕ್ಷೇತ್ರ ಇಂದು ರಾಜ್ಯದಲ್ಲಿ ಹೆಸರು ಪಡೆದಿದೆ. ಮುಂದೆಯೂ ಸಹಕಾರಿಗಳು ಅವರು ತೋರಿದ ಮಾರ್ಗದರ್ಶನದಲ್ಲಿ ಮುನ್ನಡೆದು ಬ್ಯಾಂಕ್ ಗೆ ಒಳ್ಳೆಯ ಹೆಸರು ತರೋಣ“ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ಮಾತಾಡಿ, “ಮೊಳಹಳ್ಳಿ ಶಿವರಾಯರ ಆದರ್ಶ ನಮ್ಮೆಲ್ಲರಿಗೂ ಪ್ರೇರಣೆಯಾಗಿದೆ. ಜಿಲ್ಲೆಯ ಸಹಕಾರಿ ಕ್ಷೇತ್ರದ ಹಿರಿಯರಾದ ಮೊಳಹಳ್ಳಿಯವರನ್ನು ನಾವು ನಿತ್ಯ ಸ್ಮರಿಸಬೇಕಿದೆ. ಡಾ.ಎಂ.ಎನ್.ರಾಜೇಂದ್ರ ಕುಮಾರ್ ನೇತೃತ್ವದಲ್ಲಿ ಬ್ಯಾಂಕ್ ಇನ್ನಷ್ಟು ಸಾಧನೆಯ ಪಥದಲ್ಲಿ ಮುನ್ನಡೆಯಲಿ“ ಎಂದರು.
ಕೆ.ಎಂ.ಎಫ್. ಅಧ್ಯಕ್ಷ ಸುಚರಿತ ಶೆಟ್ಟಿ ಮಾತಾಡಿ, ”ಮೊಳಹಳ್ಳಿ ಶಿವರಾಯರು ಹಾಕಿದ ಭದ್ರವಾದ ಅಡಿಪಾಯದಿಂದ ಸಹಕಾರಿ ಕ್ಷೇತ್ರ ಇಂದು ಬೆಳಗುತ್ತಿದೆ. ರಾಜೇಂದ್ರ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಎಸ್ ಸಿಡಿಸಿಸಿ ಬ್ಯಾಂಕ್ ಜನಮನ್ನಣೆ ಪಡೆದಿದೆ. ಮುಂದೆಯೂ ಸಹಕಾರಿ ಕ್ಷೇತ್ರ ಯಶಸ್ಸಿನ ಪಥದಲ್ಲಿ ನಡೆಯಲಿ“ ಎಂದರು.
ರಾಜಾರಾಮ್ ಭಟ್, ಚಿತ್ತರಂಜನ್, ಶಶಿಕುಮಾರ್ ರೈ ಬೊಲ್ಯೊಟ್ಟು, ಜಯರಾಮ ರೈ ಬಳಜ್ಜ, ಸಾವಿತ್ರಿ, ಬ್ಯಾಂಕ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ ಮತ್ತಿತರರು ಉಪಸ್ಥಿತರಿದ್ದರು.