Visitors have accessed this post 1442 times.
ದಿಸ್ಪುರ್: ಅಸ್ಸಾಂ ಕ್ಯಾಬಿನೆಟ್ ಮುಸ್ಲಿಂ ವಿವಾಹ ನೋಂದಣಿ ಮಸೂದೆ, 2024 ಅನ್ನು ಅನುಮೋದಿಸಿದೆ. ಇದು ಖಾಜಿ ಅಥವಾ ಮೌಲ್ವಿಗಳು ಮುಸ್ಲಿಂ ವಿವಾಹಗಳನ್ನು ನೋಂದಾಯಿಸುವುದನ್ನು ತಡೆಯಲಿದ್ದು, ಈ ಕಾರ್ಯವನ್ನು ಉಪ-ರಿಜಿಸ್ಟ್ರಾರ್ ನಿರ್ವಹಿಸಲಿದ್ದಾರೆ.
ಈ ಮೂಲಕ ಬಾಲ್ಯ ವಿವಾಹವನ್ನು ತಡೆಯಲು ಸಿಎಂ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಸರ್ಕಾರವು ಮಹತ್ವದ ಹೆಜ್ಜೆಯನ್ನು ಒಟ್ಟಿದೆ. ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು, ’18 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳನ್ನು ಒಳಗೊಂಡ ಯಾವುದೇ ಮದುವೆಯನ್ನು ನೋಂದಾಯಿಸಲಾಗುವುದಿಲ್ಲ ಎಂದು ನಾವು ಮಸೂದೆಯನ್ನು ಪರಿಚಯಿಸಿದ್ದೇವೆ.
ಅಲ್ಲದೇ, ನೋಂದಣಿಯ ಅಧಿಕಾರವನ್ನು ಖಾಜಿಯಿಂದ ಸಬ್ ರಿಜಿಸ್ಟ್ರಾರ್ ಗೆ ವರ್ಗಾಯಿಸಲಾಗುವುದು” ಎಂದು ತಿಳಿಸಿದ್ದಾರೆ. ಏಕರೂಪ ನಾಗರಿಕ ಸಂಹಿತೆಯತ್ತ ಒಂದು ಹೆಜ್ಜೆ ಎಂದು ಪರಿಗಣಿಸಲಾದ ಮಸೂದೆಯು ಶುಕ್ರವಾರ ಮಂಡನೆಯಾಗಲಿದೆ. ಮುಸ್ಲಿಂ ವಿವಾಹ ಮತ್ತು ವಿಚ್ಛೇದನದ ಕಾರ್ಯವಿಧಾನಗಳನ್ನು ಖಾಝಿಗಳು ಅಥವಾ ಮೌಲ್ವಿಗಳು ಮೇಲ್ವಿಚಾರಣೆ ಮಾಡುತ್ತಾರೆ. ಈ ವರ್ಷದ ಆರಂಭದಲ್ಲಿ ಸರ್ಕಾರವು 1935ರ ಅಸ್ಸಾಂ ಮುಸ್ಲಿಂ ವಿವಾಹಗಳು ಮತ್ತು ವಿಚ್ಛೇದನ ನೋಂದಣಿ ಕಾಯ್ದೆಯನ್ನು ಸುಗ್ರೀವಾಜ್ಞೆಯ ಮೂಲಕ ರದ್ದುಗೊಳಿಸಿತ್ತು.