Visitors have accessed this post 1369 times.
ಬಂಟ್ವಾಳ: ನವ ದಂಪತಿಗಳಿಬ್ಬರು ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತ ಸಂಭವಿಸಿ ನವವಿವಾಹಿತೆ ಸಾವನ್ನಪ್ಪಿದ್ದು, ಪತಿ ಗಂಭೀರವಾಗಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ ಮಂಗಳೂರು-ಬೆಂಗಳೂರು ರಸ್ತೆಯ ಬಂಟ್ವಾಳದ ತಲಪಾಡಿ ಎಂಬಲ್ಲಿ ನಡೆದಿದೆ.
ಮೃತಪಟ್ಟವರನ್ನು ನವವಿವಾಹಿತೆ ಪೆರ್ನೆ ಸಮೀಪದ ಒಡ್ಯದಗಯ ನಿವಾಸಿ ಅನಿಶ್ ಕೃಷ್ಣ ಎಂಬವರ ಪತ್ನಿ ಮಾನಸಗಂಭೀರ ಗಾಯಗೊಂಡ ಪತಿ ಅನಿಶ್ ಕೃಷ್ಣ ಎಂದು ಗುರುತಿಸಲಾಗಿದೆ. ಘಟನೆಯಿಂದ ಗಂಭೀರವಾಗಿ ಗಾಯಗೊಂಡ ಅನಿಶ್ ಕೃಷ್ಣ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಬಿಸಿರೋಡ್ ಕಡೆಯಿಂದ ಮಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದ ದಂಪತಿಗಳ ಆಲ್ಟೋ ಕಾರು ನಿಯಂತ್ರಣ ಕಳೆದುಕೊಂಡು ರಸ್ತೆಯಿಂದ ಡಿವೈಡರ್ ಮೇಲಿನಿಂದ ಇನ್ನೊಂದು ಬದಿಗೆ ಹಾರಿ ಮಂಗಳೂರು ಕಡೆಯಿಂದ ಬಿಸಿರೋಡಿನ ಕಡೆಗೆ ಬರುತ್ತಿದ್ದ ಕೆ.ಎಸ್.ಆರ್‌ಟಿ.ಸಿ ಬಸ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದ್ದು, ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಘಟನೆಯಿಂದ ಹೆದ್ದಾರಿಯಲ್ಲಿ ಕೆಲಹೊತ್ತು ಸಂಚಾರಕ್ಕೆ ಅಡಚಣೆ ಉಂಟಾಯಿತು. ಸೆ.5 ರಂದು ದೇಂತಡ್ಕ ದೇವಸ್ಥಾನದಲ್ಲಿ ಮದುವೆ ನಡೆದಿತ್ತು. ಮದುವೆ ಕಾರ್ಯಕ್ರಮದ ವಿಚಾರವಾಗಿ ಇಂದು ಅಲ್ಲಿನ ಕೆಲವೊಂದು ಲೆಕ್ಕಾಚಾರ ಮಾಡಲು ದೇಂತಡ್ಕ ದೇವಸ್ಥಾನಕ್ಕೆ ಬಂದು ವಾಪಸ್ ಮಾವನ ಮನೆಗೆ ಹೋಗುವ ವೇಳೆ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಇಬ್ಬರು ಮಂಗಳೂರು ಶಾಸಗಿ ಕಂಪನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.