Visitors have accessed this post 495 times.
ಮಂಗಳೂರು : ಹಳೆ ಮನೆ ಕೆಡವುತ್ತಿದ್ದಾಗ ಗೋಡೆ ಸಮೇತ ಲಿಂಟಲ್ ಬಿದ್ದು ಇಬ್ಬರು ಮೃತಪಟ್ಟ ದಾರುಣ ಘಟನೆ ಮಂಗಳೂರು ನಗರದ ಜೈಲ್ ರೋಡಿನಲ್ಲಿ ಗುರುವಾರ ಸಂಭವಿಸಿದೆ.
ಜೇಮ್ಸ್ ಜತ್ತಣ್ಣ ಮತ್ತು ಎಡ್ವಿನ್ ಮಾಬೇನ್ ಮೃತ ದುರ್ದೈವಿಗಳಾಗಿದ್ದಾರೆ. ಜೇಮ್ಸ್ ಜತ್ತನ್ನ ಪೂರ್ವಜರ ಮನೆ ಇದಾಗಿದ್ದು, ಪಾಲಿನಲ್ಲಿ ಅವರಿಗೆ ಈ ಮನೆ ಸಿಕ್ಕಿತ್ತು. ಮನೆಗೆ ತಾಗಿಕೊಂಡಂತೆ ಅಡ್ವಿನ್ ಅವರ ಮನೆ ಇದೆ. ಜೇಮ್ಸ್ ಅವರು ತನ್ನ ಹಳೆ ಮನೆಯನ್ನು ಕೆಡವಿ ಅದೇ ಜಾಗದಲ್ಲಿ ಹೊಸ ಮನೆ ಕಟ್ಟಲು ಉದ್ದೇಶಿಸಿದ್ದು, ಅದರಂತೆ ಜೆಸಿಬಿ ಮೂಲಕ ಮನೆ ಕೆಡಹುವ ಕಾರ್ಯ ಬುಧವಾರ ಆರಂಭವಾಗಿತ್ತು.
ಗುರುವಾರ ಬೆಳಗ್ಗೆ ಮತ್ತೆ ಕೆಲಸ ಆರಂಭವಾಗಿದ್ದು, ಈ ವೇಳೆ ಜೇಮ್ಸ್ ಸ್ಥಳದಲ್ಲೇ ಇದ್ದು ಉಸ್ತುವಾರಿ ನೋಡಿಕೊಂಡಿದ್ದರು. ಈ ಮನೆಗೆ ತಾಗಿಕೊಂಡೇ ಅಡ್ವಿನ್ ಮನೆ ಇರುವುದರಿಂದ ಕೆಡಹುವ ಸಮಯದಲ್ಲಿ ಅಡ್ವಿನ್, ತಮ್ಮ ಮನೆಗೆ ಹಾನಿಯಾಗಿದೆಯೇ ಎಂಬುದನ್ನು ನೋಡಲು ಜೇಮ್ಸ್ ಮನೆ ಕಂಪೌಂಡಿಗೆ ಬಂದಿದ್ದರು. ಈ ಸಂದರ್ಭ ಜೇಮ್ಸ್ ಅವರು ಪಕ್ಕದ ಇನ್ನೊಂದು ಮನೆಯ ಜಗುಲಿಯಲ್ಲಿದ್ದು, ಅಡ್ವಿನ್ ಕರೆದರೆಂದು ಅಲ್ಲಿಗೆ ತೆರಳಿ ಮಾತುಕತೆ ನಡೆಸುತ್ತಿದ್ದಾಗ ಹಠಾತ್ತನೆ ಕೆಡಹುತ್ತಿದ್ದ ಮನೆಯ ಗೋಡೆ ಸಮೇತ ಬೃಹತ್ ಕಾಂಕ್ರೀಟ್ ಲಿಂಟಲ್ ಇಬ್ಬರ ಮೇಲೂ ಉರುಳಿಬಿತ್ತು. ಭಾರೀ ಗಾತ್ರದ ಲಿಂಟಲ್ ಆಗಿದ್ದರಿಂದ ಇಬ್ಬರೂ ಅದರಡಿ ಸಿಲುಕಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.