Visitors have accessed this post 580 times.
ಮಂಗಳೂರು: ಐದು ವರ್ಷದ ಹಿಂದೆ ನಗರದಲ್ಲಿ ನಡೆದಿದ್ದ ಶ್ರೀಮತಿ ಶೆಟ್ಟಿ ಕೊಲೆ ಪ್ರಕರಣದ ಮೂವರ ಆರೋಪವು ಸಾಬೀತಾಗಿದೆ. ಆದರೆ ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಿ ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಎಚ್. ಎಸ್. ಶುಕ್ರವಾರ ಆದೇಶ ಹೊರಡಿಸಿದ್ದಾರೆ. ಸೆಮಿನರಿ ಕಂಪೌಂಡ್, ಅತ್ತಾವರ ನ್ಯೂರೋಡ್ ಕಂಕನಾಡಿಯ ಮೂಲ ನಿವಾಸಿಯಾಗಿರುವ ಜೋನಸ್ ಸ್ಯಾಮ್ಸನ್ ಅಲಿಯಾಸ್ ಜೋನಸ್ ಜೌಲಿನ್ ಸ್ಯಾಮ್ಸನ್, ಅವರ ಪತ್ನಿ ವೆಲೆನ್ಸಿಯಾದ ವಿಕ್ಟೋರಿಯಾ ಮಥಾಯಿಸ್ ಹಾಗೂ ಕುಂಜತ್‌ಬೈಲ್ ಮರಕಡ ಗ್ರಾಮ ತಾರಿಪಾಡಿ ಗುಡ್ಡೆಯ ರಾಜು ಆರೋಪಿಗಳು.
ಶ್ರೀಮತಿ ಶೆಟ್ಟಿ ಅತ್ತಾವರ ಸಮೀಪ ಎಲೆಕ್ಟ್ರಾನಿಕ್ಸ್ ಅಂಗಡಿ ಇಟ್ಟುಕೊಂಡಿದದ್ದರು, ಅಲ್ಲದೆ ಚಿಟ್ ಫಂಡ್ ವ್ಯವಹಾರ ನಡೆಸುತ್ತಿದ್ದು, ಕೊಲೆ ಆರೋಪಿಗಳಲ್ಲಿ ಜೋನಸ್ ಸ್ಯಾಮ್ಸನ್ ಕುರಿಚಿಟ್ ಫಂಡ್‌ನಲ್ಲಿ ಎರಡು ಸದಸ್ಯತ್ವ ಹೊಂದಿದ್ದ. ಅವಧಿಗೆ ಮೊದಲೇ ಎರಡೂ ಸದಸ್ಯತ್ವದ ಹಣವನ್ನು ಪಡೆದುಕೊಂಡಿದ್ದ. ಮಾಸಿಕ ಕಂತು ಪಾವತಿಸಲು ವಿಫಲನಾಗಿದ್ದ. ಕಂತು ಪಾವತಿಸುವಂತೆ ಶ್ರೀಮತಿ ಶೆಟ್ಟಿ ಒತ್ತಾಯಿಸಿದ್ದರು. 2019ರ ಮೇ 11ರಂದು ಬೆಳಗ್ಗೆ 9:15ಕ್ಕೆ ಹಣ ಕೇಳುವುದಕ್ಕಾಗಿ ಆರೋಪಿ ಜೋನಸ್‌ನ ಮನೆಗೆ ಶ್ರೀಮತಿ ಶೆಟ್ಟಿ ತೆರಳಿ ದ್ದರು. ಅಲ್ಲಿ ಮಾತಿಗೆ ಮಾತು ಬೆಳೆದು ಜೋನಸ್ ಮರದ ಪಟ್ಟಿಯ ತುಂಡಿನಿಂದ ಶ್ರೀಮತಿ ಶೆಟ್ಟಿಯ ತಲೆಗೆ ಹೊಡೆದಿದ್ದ. ಪ್ರಜ್ಞಾಹೀನರಾಗಿದ್ದ ಶ್ರೀಮತಿ ಶೆಟ್ಟಿಯನ್ನು ಜೋನಸ್ ಮತ್ತಾತನ ಪತ್ನಿ ವಿಕ್ಟೋರಿಯಾ ಬಚ್ಚಲು ಕೋಣೆಗೆ ಎಳೆದುಕೊಂಡು ಹೋಗಿ ಹರಿತವಾದ ಕತ್ತಿಯಿಂದ ಕುತ್ತಿಗೆಯನ್ನು ಕೊಯ್ದು ಮೈಮೇಲಿದ್ದ ಚಿನ್ನಾಭರಣಗಳನ್ನು ಸುಲಿಗೆ ಮಾಡಿ ರುಂಡ, ಕೈ, ಕಾಲು ಹಾಗೂ ಇತರ ಭಾಗಗಳನ್ನು 29 ತುಂಡುಗಳಾಗಿ ಮಾಡಿ ಪ್ಲಾಸ್ಟಿಕ್ ಗೋಣಿ ಚೀಲದಲ್ಲಿ ತುಂಬಿಸಿ ನಗರದ ಹಲವೆಡೆ ಎಸೆದಿದ್ದರು. ಶ್ರೀಮತಿ ಶೆಟ್ಟಿಯ ವ್ಯಾನಿಟಿ ಬ್ಯಾಗ್ ಮತ್ತು ಚಪ್ಪಲಿಯನ್ನು ಆರೋಪಿಗಳು ಮನೆಯಲ್ಲಿ ಸುಟ್ಟು ಹಾಕಿದ್ದರು. ಕೃತ್ಯ ನಡೆದ ಮೂರು ದಿನದ ಬಳಿಕ ನಗರದ ಕದ್ರಿ ಬಳಿಯ ಅಂಗಡಿಯೊಂದರ ಬಳಿ ರುಂಡ ಪತ್ತೆಯಾದ ನಂತರ ಈ ಕೊಲೆ ಪ್ರಕರಣವು ಬೆಳಕಿಗೆ ಬಂದಿತ್ತು. ನಂತರ ನಂದಿಗುಡ್ಡೆಯಲ್ಲಿ ದೇಹದ ತುಂಡುಗಳು ಪತ್ತೆಯಾಗಿದ್ದವು. ಪ್ರಕರಣದ ವಿಚಾರಣೆ ನಡೆಸಿದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಎಚ್.ಎಸ್. ಅವರು, ಈ ಮೂವರು ದೋಷಿತರು ಎಂದು ತೀರ್ಪು ನೀಡಿದ್ದಾರೆ. ಶಿಕ್ಷೆಯ ಪ್ರಮಾಣದ ಮೇಲೆ ವಿಚಾರಣೆಯನ್ನು ಇದೇ 17ಕ್ಕೆ ನಿಗದಿ ಪಡಿಸಲಾಗಿದೆ. ಸರ್ಕಾರದ ಪರವಾಗಿ ಸರ್ಕಾರಿ ವಕೀಲರಾದ ಜುಡಿತ್ ಓಲ್ಗಾ ಮಾರ್ಗರೇಟ್ ಕ್ರಾಸ್ತಾ ಅವರು ವಾದ ಮಂಡಿಸಿದ್ದರು.