Visitors have accessed this post 361 times.

ಮಂಗಳೂರು: ಪ್ರಯಾಣಿಕರ ಸುಗಮ ಸಂಚಾರ ಶೀಘ್ರವೇ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಮತ್ತು ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ತುಳುನಾಡ ರಕ್ಷಣಾ ವೇದಿಕೆ ಮನವಿ

Visitors have accessed this post 361 times.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕು ಪ್ರದೇಶ ಅಭಿವೃದ್ಧಿಯತ್ತ ಸಾಗುತ್ತಿದೆ. ಮಂಗಳೂರು ವಿಶ್ವವಿದ್ಯಾನಿಲಯ, ಖಾಸಗಿ ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಕಾಲೇಜುಗಳು ಈ ಪ್ರದೇಶದಲ್ಲಿ ನೆಲೆಯೂರಿದ್ದು ಹೊರ ಜಿಲ್ಲೆ ಹಾಗೂ ಅನ್ಯ ರಾಜ್ಯಗಳಿಂದ ವಿದ್ಯಾರ್ಥಿಗಳು ಬಂದು ಶಿಕ್ಷಣ ಪಡೆಯುತ್ತಿದ್ದಾರೆ. ದೇರಳಕಟ್ಟೆ ಪರಿಸರದಲ್ಲಿ ವಿಶ್ವದರ್ಜೆಯ ಆಸ್ಪತ್ರೆಗಳಿದ್ದು, ಪಕ್ಕದ ಜಿಲ್ಲೆಗಳಿಂದ ಸಹಸ್ರಾರು ರೋಗಿಗಳು ಉತ್ತಮ ಚಿಕಿತ್ಸೆ ದೊರೆಯುವ ವಿಶ್ವಾಸದಿಂದ ಇಲ್ಲಿಗೆ ಆಗಮಿಸುತ್ತಾರೆ. ಸಹಜವಾಗಿ ಈ ಭಾಗದ ಜನರು ಪ್ರಯಾಣಕ್ಕಾಗಿ ಖಾಸಗಿ ಸಿಟಿ ಬಸ್ಸು, ಸರಕಾರಿ ಬಸ್ಸು ಮತ್ತು ಸರ್ವಿಸ್ ಬಸ್‌ಗಳನ್ನು ಅವಲಂಬಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 66 ತೊಕ್ಕೊಟ್ಟು, ಕೋಟೆಕಾರು, ತಲಪಾಡಿ ಮೂಲಕ ಹಾದುಹೋಗುವುದರಿಂದ ಈ ಪ್ರದೇಶದಲ್ಲಿ ವಾಹನ ದಟ್ಟಣೆ ಅಧಿಕವಾಗಿದೆ. ಜಿಲ್ಲಾ ಕೇಂದ್ರವಾಗಿರುವ ಮಂಗಳೂರಿಗೆ ದಿನನಿತ್ಯ ಸಾವಿರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಶಿಕ್ಷಣ ಹಾಗೂ ಉದ್ಯೋಗ ನಿಮಿತ್ತ ಖಾಸಗಿ ಹಾಗೂ ಸರಕಾರಿ ಬಸ್ಸುಗಳಲ್ಲಿ ಪ್ರಯಾಣ ಬೆಳೆಸುತ್ತಾರೆ. ಅದರಲ್ಲೂ ಬೆಳಗ್ಗೆ ಮತ್ತು ಸಂಜೆಯ ಸಮಯದಲ್ಲಿ ಗರಿಷ್ಠ ಸಂಖ್ಯೆಯ ಪ್ರಯಾಣಿಕರು (ಮಕ್ಕಳು, ಮಹಿಳೆಯರು, ವೃದ್ಧರು) ಬಸ್ಸುಗಳಲ್ಲಿ ಪ್ರಯಾಣಿಸುತ್ತಿದ್ದು ಅದರಲ್ಲೂ ವಿದ್ಯಾರ್ಥಿಗಳು ಬಸ್ಸುಗಳ ಬಾಗಿಲಲ್ಲಿ ನೇತಾಡುತ್ತ ಪ್ರಯಾಣ ಮಾಡುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಕೆಲ ದಿನಗಳ ಹಿಂದೆ ಮಂಗಳೂರಿನ ತೊಕ್ಕೊಟ್ಟು ಬಳಿ ತಲಪಾಡಿಯಿಂದ ಬರುತ್ತಿದ್ದ ಖಾಸಗಿ ಸಿಟಿ ಬಸ್‌ನಲ್ಲಿ ನೇತಾಡುತ್ತ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಯೊಬ್ಬ ಬಸ್‌ನಿಂದ ಹೊರಗೆ ಎಸಯಲ್ಪಟ್ಟು ನೆಲಕ್ಕ ಬಿದ್ದು ಅದೃಷ್ಟವಶಾತ್ ಬದುಕಿ ಉಳಿದಿರುವುದು ಹೆತ್ತವರು ಜನ ಸಾಮಾನ್ಯರಲ್ಲಿ ಆತಂಕ ಮೂಡಿಸಿದೆ. ಇದಕ್ಕೆ ಪ್ರಮುಖ ಕಾರಣ ಬಸ್ಸು ಮಾಲಕರು ಪ್ರಯಾಣಿಕರಿಗೆ ಸುರಕ್ಷಾ ಸೌಲಭ್ಯ ಕಲ್ಪಿಸದಿರುವುದು (ಬಸ್ಸುಗಳಲ್ಲಿ ಬಾಗಿಲು ಅಳವಡಿಸದಿರುವುದು). ಕಳೆದ ವರ್ಷ ಮಂಗಳೂರಿನ ನಂತೂರು ಕ್ರಾಸ್‌ನಲ್ಲಿ ಬಸ್‌ನ ಕಂಡೆಕ್ಟರ್ ಒಬ್ಬರು ಬಸ್ಸಿನಿಂದ ರಸ್ತೆಗೆ ಎಸೆಯಲ್ಪಟ್ಟು ಮೃತಪಟ್ಟ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು ತಕ್ಷಣ ಸಿಟಿ ಬಸ್ಸುಗಳಿಗೆ ಬಾಗಿಲು ಅಳವಡಿಸುವಂತೆ ಮಾಲಕರಿಗೆ ಆದೇಶ ಹೊರಡಿಸಿದ್ದರು. ಈ ಆದೇಶ ಹೊರಡಿಸಿ ವರ್ಷವಾದರೂ ಇದುವರೆಗೂ ಸಿಟಿ ಬಸ್ಸು ಮಾಲಕರು ಬಾಗಿಲು ಅಳವಡಿಸದೆ ಉದ್ಘಟತನ ತೋರುತ್ತಿದ್ದಾರೆ

 

ಟ್ರಾಫಿಕ್ ಪೊಲೀಸರು ಅಪಘಾತವಾದ ಸಂದರ್ಭದಲ್ಲಿ ಬಸ್ಸು ಮಾಲಕರ ಮೇಲೆ ಕೇಸು ದಾಖಲಿಸಿ ತದನಂತರ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳದೆ ಮೌನಕ್ಕೆ ಶರಣಾಗುತ್ತಾರೆ. ಪ್ರಯಾಣಿಕರ ಸುರಕ್ಷಿತ ಪ್ರಯಾಣಕ್ಕಾಗಿ 1) ಬಸ್ಸುಗಳಲ್ಲಿ ತಕ್ಷಣ ಬಾಗಿಲು ಅಳವಡಿಸುವಿಕೆ
2) ಬಸ್ಸುಗಳಲ್ಲಿ ಸೀಟಿನ ಸಂಖ್ಯೆಗಿಂತ ಮಿತಿ ಮೀರಿ ಪ್ರಯಾಣಿಕರನ್ನು ತುಂಬಿಸದಿರುವುದು
3) ಬಸ್ಸುಗಳಲ್ಲಿ ಖಡ್ಡಾಯವಾಗಿ ಸಿಸಿಟಿವಿ ಅಳವಡಿಸುವುದು
4) ಬಸ್ಸುಗಳ ಚಾಲಕರು ಮತ್ತು ಕಂಡೆಕ್ಟರ್‌ಗಳು ಪ್ರಯಾಣದ ಸಂದರ್ಭದಲ್ಲಿ ಮೊಬೈಲ್ ಫೋನ್ ಬಳಕೆ ನಿಷೇದಿಸುವುದು
5) ಬಸ್ಸುಗಳಲ್ಲಿ ಟೇಪ್ ರೆಕಾರ್ಡರ್ (ಹಾಡು) ನಿಷೇದಗೊಳಿಸುವುದು
6) ಬಸ್ಸುಗಳನ್ನು ಬಸ್ ನಿಲ್ದಾಣಗಳಲ್ಲಿ ಮಾತ್ರವೇ ನಿಲ್ಲಿಸುವುದು
6) ಬೆಳಗ್ಗಿನ ಸಮಯದಲ್ಲಿ ಶಾಲಾ ಮಕ್ಕಳು ಹಾಗೂ ಉದ್ಯೋಗಿಗಳಿಗೆ ಉಳ್ಳಾಲ ತಾಲೂಕಿನ ಕೋಟೆಕಾರು – ಬೀರಿ, ಕೊಲ್ಯ ಮುಂತಾದ ಬಸ್ ನಿಲ್ದಾಣಗಳಲ್ಲಿ ಖಾಸಗಿ ಹಾಗೂ ಸರಕಾರಿ ಬಸ್ಸುಗಳನ್ನು ನಿಲ್ಲಿಸದೆ ಶಾಲಾ ಮಕ್ಕಳು ಹಾಗೂ ಉದ್ಯೋಗಿಗಳಿಗೆ ನಿಗದಿತ ಸಮಯದಲ್ಲಿ ಶಾಲೆ ಹಾಗೂ ಕಛೇರಿಗಳಿಗೆ ತಲುಪಲು ಕಷ್ಟವಾಗುತ್ತಿದ್ದು ಬಸ್ಸುಗಳನ್ನು ನಿಲ್ದಾಣಗಳಲ್ಲಿ ನಿಲ್ಲಿಸಿ ಶಾಲಾ ಮಕ್ಕಳು ಹಾಗೂ ಉದ್ಯೋಗಿಗಳು ಕ್ಲಪ್ತ ಸಮಯಕ್ಕೆ ತಲುಪುವಂತೆ ಅವಕಾಶ ಮಾಡಿ ಕೊಡುವುದು.
8) ಬಸ್ಸುಗಳಲ್ಲಿ ಕರ್ಕಶ ಹಾರ್ನ್‌ಗಳ ಬಳಕೆಗೆ ನಿಷೇಧ ಹೇರುವುದು
9) ಬೆಳಗ್ಗಿನ ಹಾಗೂ ಸಂಜೆಯ ಸಮಯದಲ್ಲಿ ಬಸ್ಸು ಮಾಲಕರುಗಳು ಹೆಚ್ಚುವರಿ ಬಸ್ಸಿನ ವ್ಯವಸ್ಥೆ ಕಲ್ಪಿಸುವುದು.
ಆದುದರಿಂದ ನಾವು ತಮ್ಮನ್ನು ಕೋರುವುದೇನೆಂದರೆ ಈ ಮೇಲ್ಕಂಡ ಸುರಕ್ಷತಾ ಕ್ರಮಗಳನ್ನು ಬಸ್ಸಿನ ಮಾಲಕರು ಮತ್ತು ಚಾಲಕರು ಪ್ರಯಾಣದ ಸಮಯದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ತಾವು ಕ್ರಮಕೈಗೊಂಡು ಪ್ರಯಾಣಿಕರ ಅಪಘಾತ / ಜೀವಹಾನಿ ಆಗದಂತೆ ತಡೆಯಬೇಕೆಂದು ತುಳುನಾಡ ರಕ್ಷಣಾ ವೇದಿಕೆ ಜಿಲ್ಲಾಧಿಕಾರಿಗಳು ಮತ್ತು ಆರ್, ಟಿ ,ಓ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಶೀಘ್ರವೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರ ಮಂಡಳಿ ಕಚೇರಿ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ, ಉಳ್ಳಾಲ ತಾಲೂಕು ಘಟಕ ಅಧ್ಯಕ್ಷ ಅಬೂಬಕ್ಕರ್ ಕೈರಂಗಳ, ತಾಲೂಕು ಘಟಕ ಪ್ರಧಾನ ಕಾರ್ಯದರ್ಶಿ ಸುಕೇಶ್ ಜಿಕೆ ಉಚ್ಚಿಲ್, ಉಳ್ಳಾಲ ತಾಲೂಕು ಸಂಘಟನಾ ಕಾರ್ಯದರ್ಶಿ ಯಶು ಪಕ್ಕಳ ತಲಪಾಡಿ, ಅಬ್ದುಲ್ ಅಜೀಜ್ ಉಳ್ಳಾಲ , ರೆಹಮತುಲ್ಲ ತೊಕ್ಕೊಟ್ಟು , ಮತ್ತಿತರರು ಉಪಸ್ಥಿತರಿದರು.

Leave a Reply

Your email address will not be published. Required fields are marked *