Visitors have accessed this post 398 times.
ಕಾಲೇಜು ಮುಗಿಸಿ ಸ್ನೇಹಿತರೊಂದಿಗೆ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿಗೆ ಹಿಂದಿನಿಂದ ಬಂದ ಟಿಪ್ಪರ್ ಡಿಕ್ಕಿ ಹೊಡೆದು ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟ ಘಟನೆ ಕುಂದಾಪುರ, ಕೋಟೇಶ್ವರ ಪ್ರಥಮ ದರ್ಜೆ ಕಾಲೇಜು ಸಮೀಪ ಕೋಟೇಶ್ವರ ಹಾಲಾಡಿ ರಸ್ತೆಯ ಕಟ್ಕೇರಿ ಎಂಬಲ್ಲಿ ಮಂಗಳವಾರ ನಡೆದಿದೆ.
ನಾಗೂರು ನಿವಾಸಿ ಪ್ರಸ್ತುತ ಕೋಟೇಶ್ವರದ ಕಾಳಾವರ ವರದರಾಜ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ಬಿಎಸ್ಸಿ ವಿದ್ಯಾರ್ಥಿ ಧನುಷ್ ಮೃತ ದುರ್ದೈವಿ
ಧನುಷ್ ತನ್ನ ಇಬ್ಬರು ಸ್ನೇಹಿತರೊಂದಿಗೆ ಕಾಲೇಜು ಮುಗಿಸಿ ಕೋಟೇಶ್ವರದತ್ತ ರಸ್ತೆ ಬದಿಯ ಇಂಟರ್ ಲಾಕ್ ಮೇಲೆ ನಡೆದುಕೊಂಡು ಬರುತ್ತಿದ್ದ. ಅತೀ ವೇಗವಾಗಿ ಹಿಂದಿನಿಂದ ಬಂದ ಶ್ರೀ ಮಹಾಗಣಪತಿ ಪ್ರಸನ್ನ ಎಂಬ ಹೆಸರಿನ ಟಿಪ್ಪರ್ ಎದುರಿನಿಂದ ಬರುತ್ತಿದ್ದ ಕಾರನ್ನು ತಪ್ಪಿಸಲು ತೀರಾ ಬಲಬದಿಗೆ ಬಂದು ಧನುಷ್ ನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ.
ಅಪಘಾತದ ಪರಿಣಾಮ ಧನುಷ್ ಲಾರಿಯಡಿಗೆ ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಈ ಬಗ್ಗೆ ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.