ಮಂಗಳೂರು: ಮಾಜಿ ಶಾಸಕ ಮೊಯ್ದೀನ್ ಬಾವಾ ಸಹೋದರ ಮುಮ್ತಾಜ್ ಅಲಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಪ್ರಕರಣದ ಕಿಂಗ್‌ಪಿನ್ ಸೇರಿದಂತೆ ಮತ್ತೆ ಮೂವರನ್ನು ಬಂಧಿಸಿದೆ. ಅಬ್ದುಲ್ ಸತ್ತಾರ್, ಮುಸ್ತಫಾ ಮತ್ತು ಶಾಫಿ ಬಂಧಿತ ಆರೋಪಿಗಳು. ಮುಮ್ತಾಜ್ ಅಲಿಯವರು ಕೂಳೂರು ಸೇತುವೆಯ ಬಳಿ ಕಾರನ್ನು ನಿಲ್ಲಿಸಿ ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆ ಮಾಡಿದ್ದರು. ಸೋಮವಾರ ಬೆಳಗ್ಗೆ ಅವರ ಮೃತದೇಹ ಪತ್ತೆಯಾಗಿತ್ತು. ಈ ನಡುವೆ ಮುಮ್ತಾಜ್ ಅಲಿಯವರ ಸಹೋದರ ಬಿ.ಎಂ. ಹೈದರ್ ಅಲಿಯವರು ಆತ್ಮಹತ್ಯೆಯ ಹಿಂದೆ ಹಣಕ್ಕಾಗಿ ಬ್ಲ್ಯಾಕ್‌ಮೇಲ್, ಹನಿಟ್ರ್ಯಾಪ್ ಮಾಡಿರೋದೇ ಕಾರಣ ಎಂದು ಕಾವೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸದ್ಯ ಸಿಸಿಬಿ ಪೊಲೀಸರು ಪ್ರಕರಣದಲ್ಲಿ ಎ1 ಆರೋಪಿ ರೆಹಮತ್ ಮತ್ತು ಆಕೆಯ ಪತಿ ಶೋಯಬ್ ಎಂಬವರನ್ನು ಈಗಾಗಲೇ ವಶಪಡಿಸಿಕೊಂಡಿತ್ತು. ಇದೀಗ ಪ್ರಕರಣದ ಕಿಂಗ್ ಪಿನ್ ಅಬ್ದುಲ್ ಸತ್ತಾರ್ ಸೇರಿದಂತೆ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿ ಕಾವೂರು ಪೊಲೀಸ್ ಠಾಣೆಯ ತನಿಖಾಧಿಕಾರಿಯವರ ಮುಂದೆ ಹಾಜರುಪಡಿಸಿದ್ದಾರೆ.