ದೇಶದ ಅಗ್ರಗಣ್ಯ ಉದ್ಯಮಿ, ಅತ್ಯಂತ ಗೌರವಾನ್ವಿತ ವ್ಯಕ್ತಿ, ಟಾಟಾ ಸನ್ಸ್ ಗೌರವಾಧ್ಯಕ್ಷ ರತನ್ ನಾವಲ್ ಟಾಟಾ (86) ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹಿರಿಯ ಜೀವ ಚಿಕಿತ್ಸೆಗಾಗಿ ಮೊನ್ನೆಯಷ್ಟೇ ಮುಂಬೈನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಮತ್ತೆ ಅವರ ಅನಾರೋಗ್ಯ ಉಲ್ಬಣಿಸಿದಾಗ ಆಸ್ಪತ್ರೆಗೆ ಸೇರಿಸಲಾಗಿತ್ತು. ಬುಧವಾರ ರಾತ್ರಿ ರತನ್ ಟಾಟಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 1991ರಲ್ಲಿ ಟಾಟಾ ಸನ್ಸ್ ಸಮೂಹ ಸಂಸ್ಥೆಯ ಅಧ್ಯಕ್ಷರಾಗಿದ್ದ ರತನ್ ಟಾಟಾ, ತಮ್ಮ ಸಂಸ್ಥೆಯನ್ನು 100 ಬಿಲಿಯನ್ ಡಾಲರ್ ಮೌಲ್ಯದ ಜಾಗತಿಕ ದರ್ಜೆಯ ಸಾಮ್ರಾಜ್ಯವನ್ನಾಗಿ ವಿಸ್ತರಿಸಿದ್ದರು. ಡಿಸೆಂಬರ್ 2012ರಲ್ಲಿ ಟಾಟಾ ಸನ್ಸ್ ಸಮೂಹ ಸಂಸ್ಥೆಯ ಅಧ್ಯಕ್ಷ ಹುದ್ದೆಯಿಂದ ನಿವೃತ್ತರಾಗಿದ್ದ ರತನ್ ಟಾಟಾ, ನಂತರ ಗೌರವಾಧ್ಯಕ್ಷರಾಗಿ ನೇಮಕಗೊಂಡಿದ್ದರು. ಅವಿವಾಹಿತ ರತನ್ ಟಾಟಾ ಅವರು ಅಪರೂಪದ ಉದ್ಯಮಿಯಾಗಿ ಬೆಳೆದು ದೇಶದ ಕೈಗಾರಿಕಾ ಕ್ಷೇತ್ರದಲ್ಲಿ ದಂತಕತೆಯಾಗಿದ್ದರು. ದೇಶದ ಆಸ್ತಿಯಾಗಿದ್ದ ರತನ್ ಟಾಟಾ ಅವರು ತಮ್ಮ ಗಳಿಕೆಯನ್ನೆಲ್ಲಾ ದಾನಧರ್ಮಗಳಲ್ಲಿ ವಿನಿಯೋಗಿಸಿದ್ದಾರೆ. ಕೈಗಾರಿಕೋದ್ಯಮಿ ರತನ್ ಟಾಟಾ ವಿಧಿವಶರಾದ ಸುದ್ದಿ ಕೇಳಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿ, ಹಿರಿಯ ಚೇತನಕ್ಕೆ ಅಶೃತರ್ಪಣ ಸಲ್ಲಿಸಿದ್ದಾರೆ: