ಪುತ್ತೂರು: ಹಿರಿಯ ಸಾಮಾಜಿಕ ಧುರೀಣ, ಮಾಡನ್ನೂರು ಗ್ರಾಮದ ಅಮ್ಚಿನಡ್ಕ ನಿವಾಸಿ ಮಾಡನ್ನೂರು ಕೊಚ್ಚಿ ಮರ್ಹೂಂ ಅಬ್ದುಲ್ ಖಾದರ್ ಹಾಜಿಯವರ ಪುತ್ರ ಕೆ.ಕೆ.ಕುಂಞಿ ಅಹ್ಮದ್ ಹಾಜಿ ಇಂದು ಶನಿವಾರ ಮುಂಜಾನೆ ಸ್ವಗೃಹದಲ್ಲಿ ನಿಧನ ರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು.
ಬಿಜೆಪಿಯಲ್ಲಿ ಸಕ್ರಿಯರಾಗಿದ್ದ ಅವರು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಮಟ್ಟದ ನಾಯಕರಾಗಿದ್ದರು. ದ.ಕ. ಜಿಲ್ಲಾ ಬಿಜೆಪಿಯ ಉಪಾಧ್ಯಕ್ಷರಾಗಿ, ಬಿಜೆಪಿ ರಾಜ್ಯ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷರಾಗಿದ್ದರು. ಮಾಡನ್ನೂರು ಜುಮಾ ಮಸೀದಿಯ ಮತ್ತು ಅಮ್ಚಿನಡ್ಕ ಜುಮಾ ಮಸೀದಿಯ ಆಡಳಿತ ಸಮಿತಿಯಲ್ಲಿ ಹಲವಾರು ವರ್ಷಗಳ ಕಾಲ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಅಧ್ಯಕ್ಷರಾಗಿ, ಕಾವು ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಹಲವಾರು ಸಂಘ ಸಂಸ್ಥೆಗಳಲ್ಲಿ ಮತ್ತು ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲೂ ಸೇವೆ ಸಲ್ಲಿಸಿದ್ದರು. ಮೃತರು ಇಬ್ಬರು ಪುತ್ರರು, ಮೂವರು ಪುತ್ರಿಯರು ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಮೃತರ ದಫನ ಕಾರ್ಯ ಸಂಜೆ ಮಾಡನ್ನೂರು ಮಸೀದಿಯ ದಫನ ಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.