May 19, 2026
WhatsApp Image 2025-04-04 at 4.43.02 PM

ಇತ್ತೀಚೆಗೆ ಅಂಕೋಲಾದ ರಾಮನಗುಳಿ ಬಳಿ ಕಾರೊಂದರಲ್ಲಿ ದಾಖಲೆ ರಹಿತ 1.14 ಕೋಟಿ ರೂ. ನಗದು ಸಿಕ್ಕಿದ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಮುಂಬೈಯಲ್ಲಿ ಬಂಧಿಸಿ ಕರೆತರುತ್ತಿರುವಾಗ ಪೊಲೀಸರಿಗೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಇಬ್ಬರು ಆರೋಪಿಗಳ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ಹಳಿಯಾಳ ತಾಲೂಕಿನ ಭಾಗವತಿ ಅರಣ್ಯ ಪ್ರದೇಶದಲ್ಲಿ ಗುರುವಾರ ನಡೆದಿದೆ.

ಮಂಗಳೂರು ಮೂಲದ ಕುಖ್ಯಾತ ತಲ್ಲತ್ ಗ್ಯಾಂಗ್’ನ ರೌಡಿಶೀಟರ್ ತಲ್ಲತ್, ನೌಫಾಲ್ ಹಾಗೂ ಸಾಹೀಲ್ ಅವರನ್ನು ಮುಂಬಯಿಯಲ್ಲಿ ಬಂಧಿಸಿ ಕರೆತರುತ್ತಿದ್ದಾಗ ಈ ಘಟನೆ ನಡೆದಿದೆ.
ಹಳಿಯಾಳದ ಭಾಗವತಿ ಅರಣ್ಯ ಪ್ರದೇಶದಲ್ಲಿ ಮೂತ್ರ ವಿಸರ್ಜನೆಗೆಂದು ವಾಹನ ನಿಲ್ಲಿಸಿದ್ದ ವೇಳೆ ತಲ್ಲತ್ ಹಾಗೂ ನೌಫಾಲ್ ಪೊಲೀಸರ ಮೇಲೆ ಮದ್ಯದ ಬಾಟಲಿ ಹಾಗೂ ಕಲ್ಲಿನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದರು ಎಂದು ಪೊಲೀಸರು ಮಾಹಿತಿ ನೀಡಿದರು.

ಆಗ ಪೊಲೀಸರು ಅವರ ಕಾಲಿಗೆ ಗುಂಡು ಹಾರಿಸಿದರು. ಇನ್ನೊಬ್ಬ ಆರೋಪಿ ಸಾಹೀಲ್ ವಾಹನದಲ್ಲಿ ಕುಳಿತುಕೊಂಡ ಕಾರಣ ಆತನಿಗೆ ಗುಂಡು ಹಾರಿಸದೆ ಅಂಕೋಲಾ ಪೊಲೀಸ್ ಠಾಣೆಗೆ ರವಾನಿಸಲಾಗಿದೆ. ಘಟನೆಯಲ್ಲಿ ಪೊಲೀಸರಿಗೂ ಗಾಯಗಳಾಗಿದ್ದು, ಹಳಿಯಾಳ ತಾಲೂಕು ಆಸ್ಪತ್ರೆಯಲ್ಲಿ ಆರೋಪಿಗಳು ಹಾಗೂ ಪೊಲೀಸರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಘಟನಾ ಸ್ಥಳಕ್ಕೆ ಎಸ್ ಪಿ ಎಂ. ನಾರಾಯಣ ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದರು.

ಜ. 28ರಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ರಾಮನಗುಳಿ ಬಳಿಯ ನಿರ್ಜನ ಪ್ರದೇಶದಲ್ಲಿ ಮಂಗಳೂರಿನ ಚಿನ್ನದಂಗಡಿ ಮಾಲೀಕ ರಾಜೇಶ ಪವಾರ್ ಅವರಿಗೆ ಸೇರಿದ್ದ ಕಾರಿನಲ್ಲಿ 1.14 ಕೋಟಿ ರೂ. ನಗದು ಪತ್ತೆಯಾಗಿತ್ತು.
ಪವಾರ್ ಮತ್ತು ಕಾರಿನ ಚಾಲಕರು ಘಟನೆ ನಡೆದ ಕೆಲ ದಿನಗಳ ಬಳಿಕ ಅಂಕೋಲಾ ಠಾಣೆಗೆ ತೆರಳಿ ದರೋಡೆ ಪ್ರಕರಣ ದಾಖಲಿಸಿದ್ದರು.
ಪೊಲೀಸರು ಕಾರನ್ನು ಪರಿಶೀಲಿಸಿದಾಗ ಸೀಟಿನೊಳಗೆ 1.14 ಕೋಟಿ ರೂ. ಹಣ ಪತ್ತೆಯಾಗಿತ್ತು. ಚಾಲಕರಿಬ್ಬರನ್ನು ತನಿಖೆಗೊಳಪಡಿಸಿದಾಗ ಸಿಕ್ಕ ಸುಳಿವಿ ನಂತೆ ಮಂಗಳೂರಿನ ಕುಖ್ಯಾತ ತಲ್ಲತ್ ಗ್ಯಾಂಗ್ ನ ಸದಸ್ಯರು ಸೇರಿ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ತಲೆಮರೆಸಿಕೊಂಡಿದ್ದ ಮೂವರ ಪತ್ತೆಗೆ ಪೊಲೀಸರು ಮುಂಬೈಗೆ ತೆರಳಿದ್ದರು.

About The Author

Leave a Reply