April 17, 2026
WhatsApp Image 2026-04-17 at 10.15.12 AM

ಮಂಗಳೂರು: 2017 ರ ಏಪ್ರಿಲ್ 4ರಂದು ಮಂಗಳೂರಿನ ಕಮಿಷನರ್ ಕಛೇರಿ ಮುಂಭಾಗದಲ್ಲಿ ನಡೆದ ಲಾಠಿ ಚಾರ್ಜ್ ಸಂಬಂಧಿಸಿದಂತೆ ದಾಖಲಾದ ಪ್ರಕರಣಕ್ಕೆ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದ್ದು, ಒಟ್ಟು 101 ಆರೋಪಿಗಳನ್ನು ಸಂಪೂರ್ಣವಾಗಿ ಬಿಡುಗಡೆಗೊಳಿಸಿದೆ.

ಜಿಲ್ಲೆಯಲ್ಲಿ ನಡೆದ ಕೊಲೆಯೊಂದಕ್ಕೆ ಪೊಲೀಸರು ಅಮಾಯಕ ಅಹ್ಮದ್ ಖುರೇಶಿ ಎಂಬಾತನನ್ನು ಅಕ್ರಮವಾಗಿ ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸದೇ ದೌರ್ಜನ್ಯ ನಡೆಸಿ ಹಲ್ಲೆ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಕೆಲ ಸಂಘಟನೆಗಳ ಕಾರ್ಯಕರ್ತರು ಪೊಲೀಸ್ ಕಮಿಷನರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲು ಮುಂದಾದಾಗ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಈ ಸಂದರ್ಭದಲ್ಲಿ ಕಲ್ಲುತೂರಾಟ ನಡೆದಿದೆ ಎಂಬ ಆರೋಪದಲ್ಲಿ ಹಲವರ ಮೇಲೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ, ಒಟ್ಟು 101 ಮಂದಿಯ ವಿರುದ್ಧ ಅಂತಿಮ ವರದಿ ಸಲ್ಲಿಸಲಾಗಿತ್ತು. ಇವುಗಳಲ್ಲಿ ಎರಡು ಪ್ರಕರಣಗಳು ಎರಡನೇ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಮತ್ತು ಮತ್ತೊಂದು ಗಂಭೀರ ಪ್ರಕರಣ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಟ್ಟಿದ್ದವು.

ವಿಚಾರಣೆ ವೇಳೆ, ಆರೋಪಗಳನ್ನು ಸಾಬೀತುಪಡಿಸಲು ಅಭಿಯೋಜಕ ಪಕ್ಷ ಸಂಪೂರ್ಣ ವಿಫಲವಾಗಿದೆ ಎಂದು ನ್ಯಾಯಾಲಯಗಳು ಅಭಿಪ್ರಾಯಪಟ್ಟಿದ್ದು, ಈ ಎಲ್ಲಾ ಪ್ರಕರಣಗಳಲ್ಲೂ ಆರೋಪಿಗಳಿಗೆ ಬಿಡುಗಡೆ ನೀಡಲಾಗಿದೆ. ಇದು 9 ವರ್ಷಗಳ ಕಾನೂನು ಹೋರಾಟಕ್ಕೆ ಸಂದ ನ್ಯಾಯದ ಗೆಲುವಾಗಿ ಪರಿಗಣಿಸಲಾಗುತ್ತಿದೆ ಎಂದು ಆರೋಪಿ ಪರ ವಕೀಲರು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಆರೋಪಿಗಳ ಪರವಾಗಿ ಮಂಗಳೂರಿನ ಲೆಕ್ಸ್ ಜೂರಿಸ್ ವಕೀಲರಾದ ಆಸಿಫ್ ಬೈಕಾಡಿ, ಮುಫೀದಾ ರಹ್ಮಾನ್, ಇರ್ಷಾದ್ ಸಖಾಫಿ ಮೊಂಟೆಪದವು, ಅಯಾಝ್ ಚಾರ್ಮಾಡಿ, ಮಹಮ್ಮದ್ ಆದಿಲ್, ನಿಶಾನ್ ಎಂ.ಕೆ, ರುಬೀನ, ಅಂಸೀನ ಅವರು ಸಮರ್ಥವಾಗಿ ವಾದ ಮಂಡಿಸಿದ್ದರು.

About The Author

Leave a Reply