April 18, 2026
WhatsApp Image 2026-04-16 at 2.49.52 PM

ಬೆಂಗಳೂರು: ಧಾರವಾಡದ ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯ ಯೋಗೀಶ್‌ ಗೌಡ ಕೊಲೆ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕಾಂಗ್ರೆಸ್‌ ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಹಿನ್ನೆಲೆಯಲ್ಲಿ ಅವರ ಶಾಸಕ ಸ್ಥಾನ ರದ್ದಾಗಿದೆ.

ಬುಧವಾರ ಶಾಸಕರು ಸೇರಿದಂತೆ 16 ಮಂದಿಯನ್ನು ಅಪರಾಧಿಗಳು ಎಂದು ತೀರ್ಪು ಪ್ರಕಟಿಸಿದ್ದ ಕೋರ್ಟ್‌ ಶುಕ್ರವಾರ ಶಿಕ್ಷೆಯ ಪ್ರಮಾಣ ಪ್ರಕಟಿಸಿದೆ. ಶಿಕ್ಷೆಗೆ ಗುರಿಯಾದ ಹಿನ್ನೆಲೆ ಜನಪ್ರತಿನಿಧಿಗಳ ಕಾಯ್ದೆಯ ಸೆಕ್ಷನ್ 8(4) ರ ಪ್ರಕಾರ ತಕ್ಷಣದಿಂದಲೇ ವಿನಯ್‌ ಕುಲಕರ್ಣಿ ಅವರ ಶಾಸಕ ಸ್ಥಾನ ರದ್ದಾಗಿದೆ.

ಜನಪ್ರತಿನಿಧಿ ಕಾಯ್ದೆ 1951ರ ಪ್ರಕಾರ ಕೊಲೆ ಕೇಸ್‌ನಲ್ಲಿ ಶಾಸಕ ಅಪರಾಧಿ ಎಂದು ಸಾಬೀತಾಗಿ ಕೋರ್ಟ್ ಶಿಕ್ಷೆ ಘೋಷಿಸಿದ ತಕ್ಷಣ, ಶಾಸಕ ಸ್ಥಾನ ಅಧಿಕೃತವಾಗಿ ರದ್ದಾಗುತ್ತದೆ. ಯಾವುದೇ ಶಾಸಕ ಅಥವಾ ಸಂಸದ ಕ್ರಿಮಿನಲ್ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿ ನ್ಯಾಯಾಲಯವು ಕನಿಷ್ಠ 2 ವರ್ಷ ಅಥವಾ ಅದಕ್ಕಿಂತ ಹೆಚ್ಚು ಅವಧಿಯ ಜೈಲು ಶಿಕ್ಷೆ ವಿಧಿಸಿದರೆ, ಅವರು ತಕ್ಷಣವೇ ತಮ್ಮ ಸ್ಥಾನದಿಂದ ಅನರ್ಹಗೊಳ್ಳುತ್ತಾರೆ.

ಕೊಲೆ ಪ್ರಕರಣಗಳಲ್ಲಿ (ಐಪಿಸಿ ಸೆಕ್ಷನ್ 302 ಅಥವಾ ಬಿಎನ್‌ಎಸ್‌ ಸೆಕ್ಷನ್ 103) ಅಪರಾಧ ಸಾಬೀತಾದರೆ ಕನಿಷ್ಠ ಶಿಕ್ಷೆ ಜೀವಾವಧಿ ಕಾರಾಗೃಹ ವಾಸ ಅಥವಾ ಗರಿಷ್ಠ ಮರಣದಂಡನೆ ಆಗಿರುತ್ತದೆ. ಇದು 2 ವರ್ಷಗಳಿಗಿಂತ ಬಹಳ ಹೆಚ್ಚಿರುವುದರಿಂದ, ಕೊಲೆ ಪ್ರಕರಣದಲ್ಲಿ ದೋಷಿಯಾದ ತಕ್ಷಣ ಶಾಸಕ ಸ್ಥಾನ ರದ್ದಾಗುತ್ತದೆ. ಶಾಸಕ ಸ್ಥಾನ ರದ್ದಾಗುವುದು ಮಾತ್ರವಲ್ಲ ಅವರು ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾದ ದಿನದಿಂದ ಮುಂದಿನ 6 ವರ್ಷಗಳ ಕಾಲ ಯಾವುದೇ ಚುನಾವಣೆಗೆ ಸ್ಪರ್ಧಿಸುವಂತಿಲ್ಲ.

ಜನಪ್ರತಿನಿಧಿ ನ್ಯಾಯಾಲಯವು ಶಿಕ್ಷೆ ಪ್ರಕಟಿಸಿದ ತಕ್ಷಣವೇ ಶಾಸಕರು ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬಹುದು. ಮೇಲಿನ ನ್ಯಾಯಾಲಯವು ಕೇವಲ ಅವರ ಜೈಲು ಶಿಕ್ಷೆಯ ಮೇಲಷ್ಟೇ ಅಲ್ಲದೆ ಅವರ ಮೇಲಿನ ಅಪರಾಧ ನಿರ್ಣಯದ ಮೇಲೂ ತಡೆಯಾಜ್ಞೆ ನೀಡಿದರೆ ಮಾತ್ರ ಅವರ ಶಾಸಕ ಸ್ಥಾನ ಮರಳಿ ಸಿಗುತ್ತದೆ. ಕೇವಲ ಜಾಮೀನು ಸಿಕ್ಕರೆ ಸ್ಥಾನ ಉಳಿಯುವುದಿಲ್ಲ.

About The Author

Leave a Reply