

ನವದೆಹಲಿ : ದಕ್ಷಿಣ ದೆಹಲಿಯ ಹಿರಿಯ ಅಧಿಕಾರಿಯೊಬ್ಬರ ಮನೆಯಲ್ಲಿ 22 ವರ್ಷದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಬಳಿಕ ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ. ಕೃತ್ಯ ನಡೆದ 12 ಗಂಟೆಗಳ ಒಳಗಾಗಿ ಪೊಲೀಸರು ಆರೋಪಿಯನ್ನು ದ್ವಾರಕಾದ ಹೋಟೆಲ್‌ನಲ್ಲಿ ಬಂಧಿಸಿದ್ದಾರೆ.
ದಕ್ಷಿಣ ವಲಯದ ಜಂಟಿ ಪೊಲೀಸ್ ಆಯುಕ್ತ ವಿಜಯ್ ಕುಮಾರ್ ನೀಡಿರುವ ಮಾಹಿತಿಯಂತೆ, ಆರೋಪಿಯು ಆರು ವಾರಗಳ ಹಿಂದೆ ಇದೇ ಮನೆಯಲ್ಲಿ ಕೆಲಸಕ್ಕಿದ್ದನು. ಹಣಕಾಸಿನ ದುರ್ನಡತೆಗಾಗಿ ಆತನನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ಮಂಗಳವಾರ ಮುಂಜಾನೆ ಪೋಷಕರು ವ್ಯಾಯಾಮಕ್ಕೆ ತೆರಳಿದ್ದಾಗ, ಮನೆಯ ಹೊರಗೆ ಇಟ್ಟಿದ್ದ ಕೀಲಿಯನ್ನು ಬಳಸಿ ಒಳನುಗ್ಗಿದ ಆರೋಪಿ, ಓದುತ್ತಿದ್ದ ಯುವತಿಯ ಮೇಲೆ ದಾಳಿ ಮಾಡಿದ್ದಾನೆ.

ಅತ್ಯಾಚಾರ ಎಸಗಿದ ಬಳಿಕ ಆರೋಪಿಯು ಯುವತಿಯ ತಲೆಯನ್ನು ಭಾರವಾದ ವಸ್ತುವಿನಿಂದ ಜಜ್ಜಿ, ಮೊಬೈಲ್ ಚಾರ್ಜರ್ ಕೇಬಲ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ. ಬಳಿಕ ಮನೆಯಲ್ಲಿದ್ದ ₹2.5 ಲಕ್ಷ ನಗದು ಮತ್ತು ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದನು. ಬೆಳಿಗ್ಗೆ 8 ಗಂಟೆಗೆ ಪೋಷಕರು ಮನೆಗೆ ಬಂದಾಗ ಪುತ್ರಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಬೆಳಕಿಗೆ ಬಂದಿದೆ. ಸದ್ಯ ಆರೋಪಿಯ ವಿರುದ್ಧ ಅತ್ಯಾಚಾರ, ಕೊಲೆ ಮತ್ತು ಡಕಾಯಿತಿ ಪ್ರಕರಣ ದಾಖಲಿಸಲಾಗಿದೆ.






