

ಸುಳ್ಯ: ಇಂಟರ್ನೆಟ್ ಸೇವೆ ವ್ಯತ್ಯಯಗೊಂಡ ಪ್ರಕರಣವೊಂದರಲ್ಲಿ, ಸೇವೆಯಲ್ಲಿನ ಲೋಪವನ್ನು ಗುರುತಿಸಿರುವ ಗ್ರಾಹಕ ನ್ಯಾಯಾಲಯವು ಬಿಎಸ್‌ಎನ್‌ಎಲ್ ಸಂಸ್ಥೆಗೆ ದಂಡ ವಿಧಿಸಿದೆ. ಪುಚ್ಚಪ್ಪಾಡಿ ಗ್ರಾಮದ ನಿವಾಸಿ ಹರಿಸುಬ್ರಹ್ಮಣ್ಯ ಎಂಬುವವರಿಗೆ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
ಹರಿಸುಬ್ರಹ್ಮಣ್ಯ ಅವರು 2019ರ ಫೆಬ್ರವರಿಯಿಂದ ಬಿಎಸ್‌ಎನ್‌ಎಲ್ ಏರ್ ಫೈಬರ್ ಸಂಪರ್ಕವನ್ನು ಬಳಸುತ್ತಿದ್ದು, ಪ್ರತಿ ತಿಂಗಳು 589 ರೂಪಾಯಿ ಶುಲ್ಕ ಪಾವತಿಸುತ್ತಿದ್ದರು. ಆದರೆ, 2024ರ ಡಿಸೆಂಬರ್ 26ರಿಂದ ಇಂಟರ್ನೆಟ್ ಸೇವೆ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಈ ಕುರಿತು ಸ್ಥಳೀಯ ಕಚೇರಿ ಮತ್ತು ಗ್ರಾಹಕ ಸೇವಾ ಕೇಂದ್ರಕ್ಕೆ ಹಲವು ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇದರಿಂದ ಬೇಸತ್ತ ಅವರು ಗ್ರಾಹಕ ಆಯೋಗದ ಮೊರೆ ಹೋಗಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಗ್ರಾಹಕ ಆಯೋಗವು, ಸೇವೆಯಲ್ಲಿನ ಲೋಪ ಮತ್ತು ಮಾನಸಿಕ ಕಿರುಕುಳಕ್ಕಾಗಿ 25,000 ರೂಪಾಯಿ ಹಾಗೂ ಕಾನೂನು ಹೋರಾಟದ ವೆಚ್ಚಕ್ಕಾಗಿ 5,000 ರೂಪಾಯಿ ಸೇರಿ ಒಟ್ಟು 30,000 ರೂಪಾಯಿ ಪರಿಹಾರವನ್ನು 45 ದಿನಗಳ ಒಳಗಾಗಿ ಪಾವತಿಸುವಂತೆ ಬಿಎಸ್‌ಎನ್‌ಎಲ್ ಸಂಸ್ಥೆಗೆ ಆದೇಶಿಸಿದೆ.
“ಗ್ರಾಹಕರಿಂದ ಮಾಸಿಕ ಶುಲ್ಕವನ್ನು ಪಡೆದ ಮೇಲೆ ಅವರಿಗೆ ನಿರಂತರ ಮತ್ತು ಗುಣಮಟ್ಟದ ಸೇವೆಯನ್ನು ಒದಗಿಸುವುದು ಸೇವಾ ಪೂರೈಕೆದಾರರ ಜವಾಬ್ದಾರಿಯಾಗಿದೆ. ಸೇವೆ ಸ್ಥಗಿತಗೊಂಡ ಬಗ್ಗೆ ನೀಡಿದ ದೂರುಗಳನ್ನು ನಿರ್ಲಕ್ಷಿಸುವುದು ಸೇವೆಯಲ್ಲಿನ ಲೋಪವಾಗಿದೆ” ಎಂದು ಆಯೋಗವು ತನ್ನ ಆದೇಶದಲ್ಲಿ ತಿಳಿಸಿದೆ. ನಿಗದಿತ ಅವಧಿಯೊಳಗೆ ಪರಿಹಾರದ ಹಣ ಪಾವತಿಸದಿದ್ದರೆ, ಬಾಕಿ ಮೊತ್ತದ ಮೇಲೆ ವಾರ್ಷಿಕ ಶೇ. 6ರಷ್ಟು ಬಡ್ಡಿಯನ್ನು ವಿಧಿಸಲಾಗುವುದು ಎಂದು ಆಯೋಗ ಎಚ್ಚರಿಸಿದೆ.






