

ಬೆಳ್ತಂಗಡಿ: ಕ್ಯಾಂಟೀನ್ ಹೆಸರಲ್ಲಿ ನಡೆಯುತ್ತಿದ್ದ ಅಕ್ರಮ ವೇಶ್ಯಾವಾಟಿಕೆ ದಂಧೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಮೂವರನ್ನು ಬಂಧಿಸಿರುವ ಘಟನೆ ಬೆಳ್ತಂಗಡಿ ನಗರ ಪಂಚಾಯತ್ ವ್ಯಾಪ್ತಿಯ ಕೆ.ಇ.ಬಿ. ರಸ್ತೆಯಲ್ಲಿ ನಡೆದಿದೆ.
ಬಂಧಿತರನ್ನು ಕ್ಯಾಂಟೀನ್ ಮಾಲೀಕ ಸುಂದರ್ ಶೆಟ್ಟಿ(55) ಹಾಗೂ ಗ್ರಾಹಕರಾದ ಉಸ್ಮಾನ್(38) ಮತ್ತು ಹೈದರ್(45) ಎಂದು ಗುರುತಿಸಲಾಗಿದೆ.ಕೆ.ಇ.ಬಿ. ರಸ್ತೆಯಲ್ಲಿರುವ ‘ಪವನ್ ಕ್ಯಾಂಟೀನ್’ ಮೇಲೆ ಪೊಲೀಸರು ಹಠಾತ್ ದಾಳಿ ನಡೆಸಿದ್ದಾರೆ. ಸರ್ಕಾರಿ ಜಾಗದಲ್ಲಿ ಈ ಕ್ಯಾಂಟಿನ್ ಅನ್ನು ಕಳೆದ 20 ವರ್ಷಗಳಿಂದ ಕ್ಯಾಂಟೀನ್ ಮಾಲೀಕ ಸುಂದರ್ ಶೆಟ್ಟಿ ನಡೆಸುತ್ತಿದ್ದರು.ಪವನ್ ಕ್ಯಾಂಟೀನ್‌ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಬೆಳ್ತಂಗಡಿ ಪೊಲೀಸರು ಈ ದಾಳಿ ನಡೆಸಿದ್ದಾರೆ. ಕಾರ್ಯಾಚರಣೆಯ ವೇಳೆ 29 ವರ್ಷದ ಮಹಿಳೆಯೊಬ್ಬರನ್ನು ರಕ್ಷಿಸಲಾಗಿದ್ದು, ಘಟನಾ ಸ್ಥಳದಿಂದ 5,000 ರೂ. ನಗದು ವಶಪಡಿಸಿಕೊಳ್ಳಲಾಗಿದೆ.ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.







