May 29, 2026
WhatsApp Image 2026-05-29 at 8.49.18 AM

ಬಂಟ್ವಾಳ: ಕೇಂದ್ರ ಸರಕಾರವು ಪಂಚಾಯತ್ ರಾಜ್ ಸ್ಥಳೀಯ ಸಂಸ್ಥೆಗಳನ್ನು ಆರ್ಥಿಕವಾಗಿ ದುರ್ಬಲಗೊಳಿಸುತ್ತಿರುವ ನೀತಿ ಹಾಗೂ ವಿವಿಧ ಜನವಿರೋಧಿ ವೈಫಲ್ಯಗಳನ್ನು ಖಂಡಿಸಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಆಶ್ರಯದಲ್ಲಿ ನಾಳೆ ಬೃಹತ್ ಪ್ರತಿಭಟನೆ ನಡೆಯಲಿದೆ. ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ದ.ಕ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಸಹಕಾರದೊಂದಿಗೆ ಈ ಪ್ರತಿಭಟನೆ ಆಯೋಜಿಸಲಾಗಿದೆ.

ಹಿರಿಯ ನಾಯಕರೂ ಮಾಜಿ ಸಚಿವರಾದ ಬಿ. ರಮನಾಥ ರೈ ಅವರ ಮಾರ್ಗದರ್ಶನದಲ್ಲಿ ದಿನಾಂಕ 30/05/2026ರ ಶನಿವಾರ ಬೆಳಿಗ್ಗೆ 10:30ಕ್ಕೆ ಬಂಟ್ವಾಳ ತಾಲೂಕು ಆಡಳಿತ ಕಛೇರಿ ಎದುರುಗಡೆ ಪ್ರತಿಭಟನೆ ನಡೆಯಲಿದ್ದು, ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸುವುದು ಹಾಗೂ ಗ್ರಾಮೀಣಾಭಿವೃದ್ಧಿಗೆ ಅಗತ್ಯ ಅನುದಾನವನ್ನು ಸಮರ್ಪಕವಾಗಿ ಬಿಡುಗಡೆಗೊಳಿಸುವಂತೆ ಆಗ್ರಹಿಸಲಾಗುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.

2025-26ನೇ ಸಾಲಿನ 15ನೇ ಹಣಕಾಸು ಯೋಜನೆಯ ಅನುದಾನವನ್ನು ಸಮರ್ಪಕವಾಗಿ ಬಿಡುಗಡೆ ಮಾಡದಿರುವುದು, ಉದ್ಯೋಗ ಖಾತರಿ ಯೋಜನೆಗೆ ಕಡಿವಾಣ ಹಾಕಿ ಗ್ರಾಮೀಣ ಜನರನ್ನು ಉದ್ಯೋಗ ವಂಚಿತರನ್ನಾಗಿಸಿರುವುದು, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ, ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ಸೇರಿದಂತೆ ಕೇಂದ್ರ ಸರಕಾರದ ವಿವಿಧ ವೈಫಲ್ಯಗಳನ್ನು ಖಂಡಿಸಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರತಿಭಟನೆಯಲ್ಲಿ ಮುಖ್ಯ ಭಾಷಣಕರಾಗಿ ಖ್ಯಾತ ವಾಗ್ಮಿ ಹಾಗೂ ಕೆ.ಪಿ.ಸಿ.ಸಿ ವಕ್ತಾರ ಸುದೀರ್ ಕುಮಾರ್ ಮರೊಳ್ಳಿ ಭಾಗವಹಿಸಿ ಮಾತನಾಡಲಿದ್ದಾರೆ. ಕೇಂದ್ರ ಸರಕಾರದ ಆಡಳಿತ ವೈಫಲ್ಯಗಳು, ಸ್ಥಳೀಯ ಸಂಸ್ಥೆಗಳ ಹಕ್ಕುಗಳಿಗೆ ಆಗುತ್ತಿರುವ ಧಕ್ಕೆ ಹಾಗೂ ಗ್ರಾಮೀಣ ಜನತೆ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಅವರು ವಿವರಿಸಲಿದ್ದಾರೆ ಎಂದು ತಿಳಿದುಬಂದಿದೆ.

ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು, ಜಿಲ್ಲಾ ಪದಾಧಿಕಾರಿಗಳು, ವಿವಿಧ ಮುಂಚೂಣಿ ಘಟಕಗಳ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರುಗಳು, ಸದಸ್ಯರುಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಂಸ್ಥೆಗಳ ಹಿತಾಸಕ್ತಿಗಾಗಿ ಸಾರ್ವಜನಿಕರು ಸಹ ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.

ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಹಾಗೂ ಪ್ರಧಾನ ಕಾರ್ಯದರ್ಶಿ ಜಗದೀಶ್ ಕೊಯಿಲ ಅವರು ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿ, ಪಂಚಾಯತ್ ರಾಜ್ ಸಂಸ್ಥೆಗಳ ಅಸ್ತಿತ್ವ ಹಾಗೂ ಗ್ರಾಮೀಣ ಜನರ ಹಕ್ಕುಗಳ ರಕ್ಷಣೆಗೆ ಕಾಂಗ್ರೆಸ್ ಸದಾ ಬದ್ಧವಾಗಿದ್ದು, ಜನಪರ ಹೋರಾಟವನ್ನು ಮತ್ತಷ್ಟು ಬಲಿಷ್ಠಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

About The Author

Leave a Reply