

ಬೆಂಗಳೂರು: ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಕರ್ನಾಟಕದ ನೂತನ ಸಿಎಂ ಆಗಿ ಡಿ.ಕೆ. ಶಿವಕುಮಾರ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಬೆನ್ನಲ್ಲೇ ಡಿಕೆಶಿ ಸಿಎಂ ಆಗುವುದು ನಿಶ್ಚಿತವಾಗಿತ್ತು. ಆದರೆ ಪ್ರಕ್ರಿಯೆಯಂತೆ ಶಾಸಕಾಂಗ ಪಕ್ಷದ ಸಭೆ ನಡೆಸುವ ಮೂಲಕ ನೂತನ ನಾಯಕನ ಆಯ್ಕೆ ಅಧಿಕೃತವಾಗಿ ಇಂದು ನಡೆದಿದೆ. ಸಿದ್ದರಾಮಯ್ಯ ಅವರ ನೇತೃತ್ವದಲ್ಲಿನ ಸರ್ಕಾರದಲ್ಲಿ 3 ವರ್ಷಗಳ ಕಾಲ ಡಿ.ಕೆ. ಶಿವಕುಮಾರ್ ಡಿಸಿಎಂ ಆಗಿ ಕಾರ್ಯ ನಿರ್ವಹಿಸಿದ್ದರು. ಕೆಪಿಸಿಸಿಯ ಜವಾಬ್ದಾರಿಯೂ ಅವರ ಹೆಗಲಮೇಲಿತ್ತು.
ಪ್ರತಿ ಶಾಸಕರಿಗೂ ಹಸ್ತಲಾಘವ ಮಾಡಿದ ಡಿಕೆಶಿ
ಸಭೆಯಲ್ಲಿ ವೀಕ್ಷಕರಾಗಿ ಜೈರಾಮ್ ರಮೇಶ್, ಕೆ.ಸಿ.ವೇಣುಗೋಪಾಲ್ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಭಾಗಿಯಾಗಿದ್ದರು. ಸಭೆಗೂ ಮೊದಲು ವಿಧಾನಸೌಧ ಕೊಠಡಿಯಲ್ಲಿ ಅಜ್ಜಯ್ಯನಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿಯೇ ಡಿಕೆಶಿ ಆಗಮಿಸಿದ್ದರು. ಸಿಎಲ್‌ಪಿ ಸಭೆಗೆ ಹಾಜರಾದ ಎಲ್ಲಾ ಶಾಸಕರಿಗೆ ಅವರು ಕುಳಿತ ಸ್ಥಳಕ್ಕೇ ತೆರಳಿ ಡಿ.ಕೆ. ಶಿವಕುಮಾರ್ ಹಸ್ತಲಾಘವ ಮಾಡಿದ್ದು ವಿಶೇಷವಾಗಿತ್ತು.

ಜೂನ್ 3ರಂದು ಪ್ರಮಾಣವಚನ
ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಜೂನ್ 3ರಂದು ಪ್ರಮಾಣ ವಚನ ಸ್ವೀಕರಿಸೋದು ನಿಶ್ಚಿತವಾಗಿದೆ. ನೊಣವಿನಕೆರೆ ಕಾಡುಸಿದ್ದೇಶ್ವರ ಮಠದ ಸ್ವಾಮೀಜಿ ಮಾರ್ಗದರ್ಶನ ಮತ್ತು ಶುಭ ಮುಹೂರ್ತದ ಆಧಾರದ ಮೇಲೆ ಈ ದಿನಾಂಕ ಫೈನಲ್ ಆಗಿದೆ. ಬುಧವಾರ ಸಂಜೆ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದು, ಯಾವುದೇ ಆಡಂಬರವಿಲ್ಲದೇ ಲೋಕಭವನದಲ್ಲಿ ನಡೆಯಲಿರುವ ಸರಳ ಕಾರ್ಯಕ್ರಮದಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಲಿದ್ದಾರೆ. ಈ ಬಗ್ಗೆ ಕೆಪಿಸಿಸಿ ಕಾರ್ಯಧ್ಯಕ್ಷ ಮತ್ತು ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಸುದ್ದಿಗೋಷ್ಠಿ ನಡೆಸಿ ಅಧಿಕೃತವಾಗಿ ಅದಾಗಲೇ ಘೋಷಣೆ ಮಾಡಿದ್ದಾರೆ.






