July 9, 2026
WhatsApp Image 2026-07-04 at 3.14.01 PM

ಉಡುಪಿ : ಬ್ಲ್ಯಾಕ್‌ಮೇಲ್ ಮಾಡಿ 51.84 ಲಕ್ಷಕ್ಕೂ ಅಧಿಕ ಹಣ ಹಾಗೂ ಚಿನ್ನಾಭರಣ ಪಡೆದು ವಂಚನೆ ಎಸಗಿರುವ ಆರೋಪದಡಿ ಇಬ್ಬರ ವಿರುದ್ಧ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿತರಾದ ಝೀನತ್ ಹಾಗೂ ಗೀತಾರಾವ್ ವಿರುದ್ಧ ದೂರು ದಾಖಲಾಗಿದೆ. ಆರೋಪಿಗಳ ಪೈಕಿ ಝೀನತ್ ಉದ್ಯಮಿಯೊಬ್ಬರಿಗೆ ಬ್ಲ್ಯಾಕ್ ಮೇಲ್ ಮಾಡಿದ ಆರೋಪದಲ್ಲಿ ಬಂಧಿತಳಾಗಿದ್ದಾಳೆ.  ಬನ್ನಂಜೆಯ ತೇಜೇಶ್ವರ್‌ ರಾವ್‌ ಅವರು 2018ರಿಂದ 2022ರವರೆಗೆ ಉಡುಪಿಯ ಮಹಾಮಾಯ ಕಾಂಪ್ಲೆಕ್ಸ್‌ನಲ್ಲಿ ಮೋದಿಕೇರ್ ಸ್ಟಾಕ್ ಪಾಯಿಂಟ್ ಅಂಗಡಿಯನ್ನು ನಡೆಸುತ್ತಿದ್ದರು. ಇದೇ ಅವಧಿಯಲ್ಲಿ ಆರೋಪಿತರಾದ ಝೀನತ್ ಹಾಗೂ ಗೀತಾರಾವ್ ಅವರ ಪರಿಚಯವಾಗಿತ್ತು.

ಮೋದಿಕೇರ್ ಕಚೇರಿಯಲ್ಲಿ ಝೀನತ್ ಅವರು ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ವಿಡಿಯೊ ಮಾಡಿಕೊಂಡು, ಅದನ್ನು ದುರುಪಯೋಗಪಡಿಸಿಕೊಳ್ಳುವುದಾಗಿ ಬೆದರಿಕೆ ಹಾಕಿ ಅಕ್ರಮ ಲಾಭ ಪಡೆಯುವ ಉದ್ದೇಶದಿಂದ ತೇಜೇಶ್ವರ್ ರಾವ್ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ ಎನ್ನಲಾಗಿದೆ.

ಈ ಮೂಲಕ ಹಂತ ಹಂತವಾಗಿ 36,84,000 ರೂಪಾಯಿ ಹಣವನ್ನು ಪಡೆದುಕೊಂಡಿರುವ ಆರೋಪ ಕೇಳಿಬಂದಿದೆ.  ಇನ್ನೊಬ್ಬ ಆರೋಪಿತೆ ಗೀತಾರಾವ್ ಅವರು ಸಹ ತೇಜೇಶ್ವರ್ ರಾವ್ ಅವರು ಬ್ಲ್ಯಾಕ್‌ಮೇಲ್ ಮಾಡಿ ಹಂತ ಹಂತವಾಗಿ 15,00,000 ರೂ. ಹಣ ಪಡೆದುಕೊಂಡಿರುವುದಲ್ಲದೆ, ಚಿನ್ನಾಭರಣಗಳು ಹಾಗೂ ಕೆಲವು ಖಾಲಿ ಚೆಕ್‌ಗಳನ್ನು ಪಡೆದು ವಂಚನೆ ಎಸಗಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ. ಈ ಸಂಬಂಧ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

About The Author

Leave a Reply