July 29, 2026
WhatsApp Image 2025-05-23 at 9.08.23 AM

 ಕಾಲೇಜಿನ ಪ್ರಾಂಶುಪಾಲರ ಕೊಠಡಿಯಲ್ಲೇ ತಂದೆಯೊಬ್ಬ ತನ್ನ ಹೆತ್ತ ಮಗಳಿಗೇ ಭೀಕರವಾಗಿ ಚಾಕು ಇರಿದು ಕೊಲೆಗೆ ಯತ್ನಿಸಿರುವ ಘಟನೆ ರಾಜಾನುಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಾಜಾನುಕುಂಟೆಯ ಖಾಸಗಿ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದ ಲಕ್ಷ್ಮಿ ದುರ್ಗ ಚಾಕು ಇರಿತಕ್ಕೊಳಗಾದ ದುರದೃಷ್ಟಕರ ಯುವತಿ. ಮಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆಕೆಯ ತಂದೆ ನಾಗೇಂದ್ರ ಎಂಬಾತನನ್ನು ಆರೋಪಿ ಎಂದು ಗುರುತಿಸಲಾಗಿದೆ.

ಘಟನೆಯ ಹಿನ್ನೆಲೆ: ಜುಲೈ 25ರ ಮಧ್ಯಾಹ್ನ ಸುಮಾರು 3:00 ಗಂಟೆಯ ವೇಳೆಗೆ ಕಾಲೇಜಿಗೆ ಆಗಮಿಸಿದ್ದ ಆರೋಪಿ ನಾಗೇಂದ್ರ, ಭದ್ರತಾ ಸಿಬ್ಬಂದಿ ಬಳಿ ತನ್ನ ಮಗಳನ್ನು ನೋಡಬೇಕೆಂದು ತಿಳಿಸಿದ್ದಾನೆ. ಬಳಿಕ ನೇರವಾಗಿ ಕಾಲೇಜಿನ ಪ್ರಾಂಶುಪಾಲರ ಕ್ಯಾಬಿನ್‌ಗೆ ತೆರಳಿದ ಆತ, ಅಲ್ಲಿಯೇ ಇದ್ದ ಮಗಳ ಜೊತೆ ಏಕಾಏಕಿ ಗಲಾಟೆ ಆರಂಭಿಸಿದ್ದಾನೆ. ಮಾತು ಬೆಳೆಯುತ್ತಿದ್ದಂತೆ ತಾನು ತಂದಿದ್ದ ಚಾಕುವಿನಿಂದ ಮಗಳ ಹೊಟ್ಟೆ, ಎದೆ ಹಾಗೂ ಕುತ್ತಿಗೆಯ ಭಾಗಕ್ಕೆ ಭೀಕರವಾಗಿ ಇರಿದು ಸ್ಥಳದಿಂದ ಪರಾರಿಯಾಗಿದ್ದಾನೆ.

ತಂದೆಯ ದಿಢೀರ್ ದಾಳಿಯಿಂದ ರಕ್ತದ ಮಡುವಿನಲ್ಲಿ ಬಿದ್ದ ಯುವತಿಯನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪ್ರಿನ್ಸಿಪಾಲ್ ಕೊಠಡಿಯಲ್ಲೇ ನಡೆದ ಈ ಭೀಕರ ಕೃತ್ಯದಿಂದ ಕಾಲೇಜು ಆವರಣದಲ್ಲಿ ಆತಂಕ ಮತ್ತು ಭಯದ ವಾತಾವರಣ ನಿರ್ಮಾಣವಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತೆಯ ಕುಟುಂಬಸ್ಥರ ದೂರಿನನ್ವಯ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿ ನಾಗೇಂದ್ರನಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.

About The Author

Leave a Reply