

ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿರುವ (PoJK) ಮಂಗಳಾ ಜಲಾಶಯದಲ್ಲಿ ಲಷ್ಕರ್-ಎ-ತೊಯ್ಬಾ (LeT) ಸಂಘಟನೆಯ ಭಯೋತ್ಪಾದಕರು ಜಲ ಯುದ್ಧ ತರಬೇತಿ (Water combat training) ಪಡೆಯುತ್ತಿರುವ ದೃಶ್ಯಾವಳಿಗಳಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ತೀವ್ರ ಆತಂಕಕ್ಕೆ ಕಾರಣವಾಗಿದೆ.
ಲಷ್ಕರ್‌ನ ಹಿರಿಯ ಕಮಾಂಡರ್ ಹಾರಿಸ್ ದಾರ್ ಇದೇ ಸ್ಥಳದಲ್ಲಿ ತಮ್ಮ ಸಂಘಟನೆಯು ವಿಶೇಷ ಜಲ ತರಬೇತಿ ನಡೆಸುತ್ತಿದೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ ಕೆಲವೇ ದಿನಗಳಲ್ಲಿ ಈ ವಿಡಿಯೋ ಹೊರಬಂದಿದೆ. ಭಾರತ ಮತ್ತು ಪಾಕಿಸ್ತಾನ ನಡುವೆ ಸಿಂಧೂ ನದಿ ನೀರು ಒಪ್ಪಂದದ (IWT) ಕುರಿತು ಭಿನ್ನಾಭಿಪ್ರಾಯಗಳು ಮುಂದುವರಿದಿರುವ ಈ ಹೊತ್ತಿನಲ್ಲಿ, ಉಗ್ರರ ಜಲ ಆಧಾರಿತ ಕಾರ್ಯಾಚರಣೆಯ ತರಬೇತಿ ದೃಶ್ಯಗಳು ಮುಂಚೂಣಿಗೆ ಬಂದಿರುವುದು ತೀವ್ರ ಕುತೂಹಲ ಕೆರಳಿಸಿದೆ. ಈ ವಿಡಿಯೋದ ಅಸಲಿಯತ್ತನ್ನು ಸ್ವತಂತ್ರವಾಗಿ ಪರಿಶೀಲಿಸಬೇಕಾಗಿದ್ದರೂ, ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ (ISI) ಬೆಂಬಲದೊಂದಿಗೆ ಮಂಗಳಾ ಜಲಾಶಯದಲ್ಲಿ ಲಷ್ಕರ್ ಉಗ್ರರು ಈಜು ಮತ್ತು ಜಲ ಸಂಚರಣೆಯ ತಾಲೀಮು ನಡೆಸುತ್ತಿರುವುದು ಇದರಲ್ಲಿ ಸೆರೆಯಾಗಿದೆ ಎಂದು ವರದಿಯಾಗಿದೆ.
ಲಷ್ಕರ್ ಕಮಾಂಡರ್ ಹಾರಿಸ್ ದಾರ್ ಇತ್ತೀಚೆಗೆ ತಮ್ಮ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿ, ಉಗ್ರರನ್ನು ಉದ್ದೇಶಿಸಿ ಮಾತನಾಡುವಾಗ ಮುಂದಿನ ಹಂತದ ಜಲ ತರಬೇತಿಯೂ ಇದೇ ಮಂಗಳಾ ಜಲಾಶಯದಲ್ಲಿ ನಡೆಯಲಿದೆ ಎಂದು ತಿಳಿಸಿದ್ದನು. ಇದೇ ಭಾಷಣದಲ್ಲಿ ಸಿಂಧೂ ನದಿ ನೀರು ಒಪ್ಪಂದದ ಬಗ್ಗೆ ಪ್ರಸ್ತಾಪಿಸಿದ್ದ ಆತ, ಭಾರತವು ಪಾಕಿಸ್ತಾನದ ನೀರನ್ನು ತಡೆದಿದೆ ಎಂದು ಆರೋಪಿಸಿದ್ದಲ್ಲದೆ, 2026 ರಲ್ಲಿ ನೀರಿನ ವಿಷಯಕ್ಕೆ ಸಂಬಂಧಿಸಿದಂತೆ ‘ಏನೋ’ ಒಂದು ಸಂಭವಿಸಲಿದೆ ಮತ್ತು ಅಂತಿಮವಾಗಿ ಪಾಕಿಸ್ತಾನವೇ ಗೆಲ್ಲಲಿದೆ ಎಂದು ಎಚ್ಚರಿಕೆ ನೀಡಿದ್ದನು. ಆತನ ಈ ಬೆದರಿಕೆ ಬೆನ್ನಲ್ಲೇ ತರಬೇತಿ ವಿಡಿಯೋ ಹೊರಬಂದಿರುವುದು ರಕ್ಷಣಾ ವಲಯದಲ್ಲಿ ಆತಂಕ ಮೂಡಿಸಿದೆ. ಈ ಮಂಗಳಾ ಜಲಾಶಯದ ಪ್ರದೇಶವು ಈ ಹಿಂದೆಯೂ ಲಷ್ಕರ್ ಚಟುವಟಿಕೆಗಳ ತಾಣವಾಗಿತ್ತು ಎಂಬುದು ಗಮನಾರ್ಹ. 2008 ರ ಮುಂಬೈ ದಾಳಿಯಲ್ಲಿ ಭಾಗಿಯಾಗಿದ್ದ ಅಜ್ಮಲ್ ಕಸಬ್ ಸೇರಿದಂತೆ ಹಲವು ಭಯೋತ್ಪಾದಕರು ಇದೇ ಮಂಗಳಾ ಪ್ರದೇಶದಲ್ಲಿ ಸಮುದ್ರ ಮತ್ತು ಜಲ ಆಧಾರಿತ ತರಬೇತಿ ಪಡೆದಿದ್ದರು ಎಂದು ಹಿಂದಿನ ಗುಪ್ತಚರ ವರದಿಗಳು ತಿಳಿಸಿವೆ.
ಪ್ರಸ್ತುತ ವೈರಲ್ ಆಗಿರುವ ವಿಡಿಯೋ ಪಾಕಿಸ್ತಾನದ ಶೇಖ್‌ಪುರಾದ್ದು ಎಂದು ಹೇಳಲಾಗುತ್ತಿದೆ.
ಕಳೆದ 2025 ರ ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ನಂತರ, ಭಾರತ ಸರ್ಕಾರವು ಸಿಂಧೂ ನದಿ ನೀರು ಒಪ್ಪಂದವನ್ನು ಅಮಾನತುಗೊಳಿಸಿತ್ತು. ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಗೆ ನೀಡುತ್ತಿರುವ ಬೆಂಬಲವನ್ನು ನಿಲ್ಲಿಸುವವರೆಗೂ ಈ ಒಪ್ಪಂದವು ಜಾರಿಗೆ ಬರುವುದಿಲ್ಲ ಎಂದು ನವದೆಹಲಿ ಸ್ಪಷ್ಟಪಡಿಸಿತ್ತು. ಅಂದಿನಿಂದ ಇಸ್ಲಾಮಾಬಾದ್ ಈ ವಿಷಯವನ್ನು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಪದೇ ಪದೇ ಪ್ರಸ್ತಾಪಿಸುತ್ತಿದ್ದರೂ, ಭಾರತ ಮಾತ್ರ ತನ್ನ ನಿಲುವಿಗೆ ಬದ್ಧವಾಗಿದೆ. ಇತ್ತೀಚೆಗೆ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಈ ವಿಷಯವನ್ನು ಪುನರುಚ್ಚರಿಸಿದ್ದು, ಸಿಂಧೂ ನದಿ ನೀರು ಒಪ್ಪಂದದ ಕುರಿತು ಭಾರತ ಸರ್ಕಾರದ ನಿಲುವು ಎಂದಿನಂತೆ ಸ್ಥಿರವಾಗಿದೆ ಮತ್ತು ಸ್ಪಷ್ಟವಾಗಿದೆ ಎಂದು ತಿಳಿಸಿದ್ದಾರೆ.






