July 16, 2026
IMG_20260716_073926

ಯೂಟಾ ರಾಜ್ಯದ ಶಾಪಿಂಗ್ ಮಾಲ್‌ ಒಂದರಲ್ಲಿ ಅತ್ಯಂತ ಆಘಾತಕಾರಿ ಘಟನೆ ನಡೆದಿದೆ. ಭಾರತೀಯ ಮೂಲದ ಉದ್ಯೋಗಿಯೊಬ್ಬರ ಧರ್ಮವನ್ನು ಕೇಳಿ ಅವರ ಮೇಲೆ ಜನಾಂಗೀಯ ದ್ವೇಷದಿಂದ ಚಾಕುವಿನಿಂದ ಇರಿಯಲಾಗಿದೆ.

ವೆಸ್ಟ್ ವ್ಯಾಲಿ ಸಿಟಿಯ ‘ವ್ಯಾಲಿ ಫೇರ್ ಮಾಲ್’ನಲ್ಲಿ ಸೋಮವಾರ ಈ ಘಟನೆ ನಡೆದಿದೆ. ಮಾಲ್‌ನ ಸಣ್ಣ ಮಳಿಗೆ ಒಂದರಲ್ಲಿ ಭಾರತೀಯ ಮೂಲದ ಸೊಹೈಲ್ ಎಂಬುವವರು ಕೆಲಸ ಮಾಡುತ್ತಿದ್ದರು. 48 ವರ್ಷದ ಪೀಟರ್ ಮೈಕೇಲ್ ಲಾರ್ಸೆನ್ ಎಂಬ ಆರೋಪಿ ಸೊಹೈಲ್ ಅವರ ಬಳಿ ಬಂದು ಮೊದಲು ಕುಡಿಯಲು ಒಂದು ಬಾಟಲಿ ನೀರು ಕೇಳಿದ್ದಾನೆ. ಆಗ ಅವರಿಬ್ಬರ ನಡುವೆ ಮಾತುಕತೆ ನಡೆದಿದೆ.

ಆ ಅಂಗಡಿಯ ಪಕ್ಕದ ಜ್ಯುವೆಲ್ಲರಿ ಅಂಗಡಿಯ ಪ್ರತ್ಯಕ್ಷದರ್ಶಿ ಉದ್ಯೋಗಿ ಲೂನಾ ನುನೆಜ್ ತಿಳಿಸಿರುವಂತೆ, “ಆರೋಪಿ ಲಾರ್ಸೆನ್ ಸೊಹೈಲ್ ಬಳಿ ಬಂದು ‘ನೀನು ಎಲ್ಲಿಂದ ಬಂದಿದ್ದೀಯಾ?’ ಎಂದು ಕೇಳಿದನು. ಅದಕ್ಕೆ ಸೊಹೈಲ್, ‘ನಾನು ಭಾರತದವನು, ನನ್ನ ಹೆಸರು ಸೊಹೈಲ್’ ಎಂದರು. ತಕ್ಷಣ ಲಾರ್ಸೆನ್ ‘ನೀನು ಮುಸ್ಲಿಮನಾ?’ ಎಂದು ಪ್ರಶ್ನಿಸಿದಾಗ ಸೊಹೈಲ್ ‘ಹೌದು’ ಎಂದರು. ಸೊಹೈಲ್ ನೀರಿನ ಬಾಟಲಿ ನೀಡಲು ತಿರುಗುತ್ತಿದ್ದಂತೆಯೇ, ಲಾರ್ಸೆನ್ ಚಾಕು ತೆಗೆದು ಅವರ ಮೇಲೆ ಮನಬಂದಂತೆ ದಾಳಿ ನಡೆಸಿದ್ದಾನೆ” ಎಂದು ಅವರು ತಿಳಿಸಿದ್ದಾರೆ. ಲೂನಾ ನುನೆಜ್ ಅವರು ಸೊಹೈಲ್ ರಕ್ಷಣೆಗಾಗಿ ಚಪ್ಪಲಿ, ಕುರ್ಚಿ ಸೇರಿದಂತೆ ಕೈಗೆ ಸಿಕ್ಕಿದ್ದನ್ನೆಲ್ಲ ಆರೋಪಿಯ ಮೇಲೆ ಎಸೆದಿದ್ದಾರೆ.

ಸೊಹೈಲ್ ಅವರ ದೇಹಕ್ಕೆ ಬರೋಬ್ಬರಿ 15 ಬಾರಿ ಚಾಕು ಇರಿಯಲಾಗಿದ್ದು, ಸದ್ಯ ಅವರು ಆಸ್ಪತ್ರೆಯಲ್ಲಿ ಹಲವು ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿ ಅತ್ಯಂತ ಗಂಭೀರ ಸ್ಥಿತಿಯಲ್ಲಿದ್ದಾರೆ. ಸೊಹೈಲ್ ಮೇಲೆ ದಾಳಿ ನಡೆಯುತ್ತಿದ್ದಾಗ, ಮಾಲ್‌ನಲ್ಲಿದ್ದ ಸಾರ್ವಜನಿಕರು ತಕ್ಷಣವೇ ಸಹಾಯಕ್ಕೆ ಬಂದಿದ್ದಾರೆ. ನಂತರ ಅಲ್ಲಿದ್ದ ಇತರರು ಆರೋಪಿಯನ್ನು ಹಿಡಿದು ಕೆಳಕ್ಕೆ ತಳ್ಳಿ, ಪೊಲೀಸರು ಬರುವವರೆಗೂ ಆತನನ್ನು ಹಿಡಿದಿಟ್ಟುಕೊಂಡಿದ್ದಾರೆ.

About The Author

Leave a Reply