July 23, 2026
arrest-2

ಸುಳ್ಯ: ಕೌಟುಂಬಿಕ ಕಿರುಕುಳ ಹಾಗೂ ಮನಸ್ತಾಪದ ಹಿನ್ನೆಲೆಯಲ್ಲಿ ವಿವಾಹಿತೆಯೊಬ್ಬಳು ಅನುಮಾನಾಸ್ಪದವಾಗಿ ಮೃತಪಟ್ಟ ಪ್ರಕರಣದಲ್ಲಿ, ಆಕೆಯನ್ನು ಕೊಲೆ ಮಾಡಲಾಗಿದೆ ಎಂಬ ದೂರಿನ ಮೇರೆಗೆ ಮೃತಳ ಮಾವ, ಅತ್ತೆ ಹಾಗೂ ನಾದಿನಿಯನ್ನು ಸುಳ್ಯ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಪುತ್ತೂರು ತಾಲೂಕಿನ ಕೆದಂಬಾಡಿ ನಿವಾಸಿ ಜುಬೈದಾ ಅವರ ಮಗಳು ಫಾತಿಮತ್‌ ನಿಶಾನ ಮೃತಪಟ್ಟ ವಿವಾಹಿತೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಳ ಮಾವ ಸಿ.ಪಿ. ಅಲವಿ , ಅತ್ತೆ ಅಯಿಷಾ ಸಿ.ಎ. ಹಾಗೂ ನಾದಿನಿ ಫಸಿಲಾ ಸಿ.ಎ. ಎಂಬುವರನ್ನು ಪೊಲೀಸರು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ಫಾತಿಮತ್‌ ನಿಶಾನ ಅವರ ವಿವಾಹ ನೆರವೇರಿತ್ತು. ಜುಲೈ 18ರ ರಾತ್ರಿ ನಿಶಾನ ತಮ್ಮ ತಾಯಿ ಜುಬೈದಾ ಅವರಿಗೆ ಫೋನ್ ಮಾಡಿ, “ಗಂಡನ ಮನೆಯಲ್ಲಿ ಮಾವ, ಅತ್ತೆ ಹಾಗೂ ನಾದಿನಿ ಮಾನಸಿಕ ಮತ್ತು ದೈಹಿಕವಾಗಿ ತೀವ್ರ ಕಿರುಕುಳ ನೀಡುತ್ತಿದ್ದಾರೆ” ಎಂದು ಅಳಲು ತೋಡಿಕೊಂಡಿದ್ದರು. ತಾಯಿ-ಮಗಳ ಸಂಭಾಷಣೆ ನಡೆಯುತ್ತಿದ್ದಂತೆಯೇ ಮಧ್ಯ ಪ್ರವೇಶಿಸಿದ ಮಾವ ಅಲವಿ, ನಿಶಾನ ಕೈಯಿಂದ ಫೋನ್ ಕಸಿದುಕೊಂಡು, “ನಿನ್ನ ಮಗಳನ್ನು ಕೊಲ್ಲುತ್ತೇನೆ” ಎಂದು ತಾಯಿ ಜುಬೈದಾ ಅವರಿಗೆ ಜೀವ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

ಕರೆ ಬೆನ್ನಲ್ಲೇ ಆತಂಕಗೊಂಡ ತಾಯಿ ಜುಬೈದಾ ಮಗಳನ್ನು ನೋಡಲು ಆಕೆಯ ಮನೆಗೆ ಹೊರಟಾಗ, ನಿಶಾನ ಮೃತಪಟ್ಟಿರುವ ಸುದ್ದಿ ತಿಳಿದುಬಂದಿದೆ. ಕೌಟುಂಬಿಕ ಕಿರುಕುಳ ನೀಡಿ ಆರೋಪಿಗಳು ಸೇರಿಕೊಂಡೇ ಮಗಳನ್ನು ಹತ್ಯೆ ಮಾಡಿದ್ದಾರೆ ಎಂದು ತಾಯಿ ಜುಬೈದಾ ಸುಳ್ಯ ಠಾಣೆಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಕೊಲೆ ಹಾಗೂ ಗೃಹ ಹಿಂಸಾಚಾರ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಜುಲೈ 22ರಂದು ಮೂವರನ್ನು ದಸ್ತಗಿರಿ ಮಾಡಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ತಿಳಿಸಿದ್ದಾರೆ.

About The Author

Leave a Reply