September 26, 2026
WhatsApp Image 2026-09-26 at 11.07.19 AM

ಮಂಗಳೂರು : ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಅಕ್ಟೋಬರ್ 18 ಮತ್ತು 19ರಂದು ಮೈಸೂರಿನ ಸಾತಗಳ್ಳಿ ಹೊರವರ್ತುಲ ರಸ್ತೆಯ ಪ್ರಾದೇಶಿಕ ಕೇಂದ್ರ ಸಮೀಪ ಪ್ರಪ್ರಥಮ ಕಂಬಳ ಉತ್ಸವ ಆಯೋಜಿಸಲಾಗುತ್ತಿದೆ ಎಂದು ಪುತ್ತೂರು ಶಾಸಕ ಹಾಗೂ ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 20 ಎಕರೆ ಪ್ರದೇಶದಲ್ಲಿ ಕಂಬಳದ ಕರೆ ನಿರ್ಮಿಸಲಾಗುತ್ತಿದ್ದು, ಏಕಕಾಲದಲ್ಲಿ 15 ಸಾವಿರ ಮಂದಿ ವೀಕ್ಷಿಸಲು ವ್ಯವಸ್ಥೆ ಮಾಡಲಾಗುತ್ತಿದೆ. 150ರಿಂದ 160 ಜೋಡಿ ಆಯ್ದ ಕೋಣಗಳನ್ನು ಸ್ಪರ್ಧೆಗೆ ಕರೆತರಲು ಉದ್ದೇಶಿಸಲಾಗಿದೆ. ಅಕ್ಟೋಬರ್ 15ರಂದು ಪ್ರಾಯೋಗಿಕ ಓಟ ನಡೆಸಲಾಗುವುದು ಎಂದರು. ಅಕ್ಟೋಬರ್ 16ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಕೋಣಗಳು ಮೈಸೂರಿನತ್ತ ಪ್ರಯಾಣಿಸಲಿದ್ದು, 18ರಂದು ಕಂಬಳಕ್ಕೆ ಚಾಲನೆ ನೀಡಿ, 19ರಂದು ಬಹುಮಾನ ವಿತರಿಸಲಾಗುವುದು. ದೊಡ್ಡ ಜೋಡಿ ಕೋಣಗಳಿಗೆ 65 ಸಾವಿರ ಹಾಗೂ ಚಿಕ್ಕ ಜೋಡಿಗೆ 50 ಸಾವಿರ ಬಹುಮಾನ ನಿಗದಿಪಡಿಸಲಾಗಿದೆ. ಕಂಬಳ ವೀಕ್ಷಣೆಗೆ ಪ್ರವೇಶ ಶುಲ್ಕ ಇರುವುದಿಲ್ಲ ಎಂದು ತಿಳಿಸಿದರು.

ದಕ್ಷಿಣ ಕನ್ನಡದ ಕರಾವಳಿ ಆಹಾರ ಸಂಸ್ಕೃತಿಯನ್ನು ಪರಿಚಯಿಸಲು ಆಹಾರ ಮಳಿಗೆಗಳನ್ನೂ ಸ್ಥಾಪಿಸಲಾಗುವುದು. ಕಂಬಳವು ತುಳುನಾಡಿನ ವೀರಕ್ರೀಡೆ ಹಾಗೂ ಜಾನಪದ ಕ್ರೀಡೆಯಾಗಿದ್ದು, ಮೈಸೂರು ದಸರಾ ಮೂಲಕ ತುಳುನಾಡು ಮತ್ತು ಕರುನಾಡಿನ ಸಾಂಸ್ಕೃತಿಕ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಲಿದೆ ಎಂದು ರಾಜ್ಯ ಕಂಬಳ ಅಸೋಸಿಯೇಷನ್ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಹೇಳಿದರು.ಈ ಸಂದರ್ಭದಲ್ಲಿ ಕಂಬಳ ಸಮಿತಿಯ ಪದಾಧಿಕಾರಿಗಳು ಮತ್ತು ಮೈಸೂರು ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

About The Author

Leave a Reply