

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳನ್ನು ಸಾಗಿಸುವ ವಾಹನಗಳಲ್ಲಿ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು, ನಿಗದಿತ ಆಸನ ಸಾಮರ್ಥ್ಯಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳ ಸಾಗಣೆಗೆ ತಡೆ ವಿಧಿಸುವುದು ಹಾಗೂ ಹಳೆಯ ಶಾಲಾ ವಾಹನಗಳ ವಿಶೇಷ ಫಿಟ್ನೆಸ್ ಮತ್ತು ಸುರಕ್ಷತಾ ತಪಾಸಣೆ ನಡೆಸುವಂತೆ ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲಾ ಜನತಾದಳ (ಜಾತ್ಯತೀತ) ನಿಯೋಗವು ಬುಧವಾರ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಅವರಿಗೆ ಮನವಿ ಸಲ್ಲಿಸಿತು.
ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ ಅವರ ನಿರ್ದೇಶನದ ಮೇರೆಗೆ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಯೋಗಿಶ್ ಶೆಟ್ಟಿ ಜಪ್ಪುರವರು ಮನವಿ ಸಲ್ಲಿಸಿ, ಜಿಲ್ಲೆಯ ಅನೇಕ ಶಾಲಾ ಹಾಗೂ ಕಾಲೇಜು ವಾಹನಗಳಲ್ಲಿ ನಿಗದಿತ ಆಸನ ಸಾಮರ್ಥ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ತುಂಬಿಸಿಕೊಂಡು ಸಂಚರಿಸಲಾಗುತ್ತಿದೆ ಎಂಬ ಬಗ್ಗೆ ಸಾರ್ವಜನಿಕರು, ಪೋಷಕರು ಹಾಗೂ ವಿದ್ಯಾರ್ಥಿಗಳಿಂದ ನಿರಂತರ ದೂರುಗಳು ವ್ಯಕ್ತವಾಗುತ್ತಿವೆ ಎಂದು ಅಧಿಕಾರಿಗಳ ಗಮನ ಸೆಳೆಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷರಾದ ಇಕ್ಬಾಲ್ ಮುಲ್ಕಿ ಹಾಗೂ ವಸಂತ ಪೂಜಾರಿ, ಯುವ ಘಟಕದ ಅಧ್ಯಕ್ಷ ಅಕ್ಷಿತ್ ಸುವರ್ಣ ಅವರು ವಿದ್ಯಾರ್ಥಿಗಳ ಸುರಕ್ಷತೆಗೆ ಸಂಬಂಧಿಸಿದ ಸಮಸ್ಯೆಗಳ ಗಂಭೀರತೆ ಹಾಗೂ ತುರ್ತು ಕ್ರಮದ ಅಗತ್ಯವನ್ನು ವಿವರಿಸಿದರು.

ಈ ಸಂದರ್ಭದಲ್ಲಿ ಮೀನುಗಾರ ಘಟಕದ ರಾಜ್ಯಾಧ್ಯಕ್ಷ ರತ್ನಾಕರ್ ಸುವರ್ಣ, ಉತ್ತರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ರತೀಶ್ ಕರ್ಕೇರ, ಜಿಲ್ಲಾ ಜೆಡಿಎಸ್ ಮುಖಂಡರಾದ ಪುತ್ತು ಮೋನು ಉಳ್ಳಾಲ, ಜಿಲ್ಲಾ ಮಹಿಳಾ ಘಟಕದ ಮಹಾ ಪ್ರಧಾನ ಕಾರ್ಯದರ್ಶಿ ಜ್ಯೋತಿ ಜೈನ್, ಜಿಲ್ಲಾ ಮಹಿಳಾ ಹಿರಿಯ ಉಪಾಧ್ಯಕ್ಷೆ ಚೂಡಾಮಣಿ ಎಲ್. ಬಂಗೇರ, ಜಿಲ್ಲಾ ಉಪಾಧ್ಯಕ್ಷೆ ಶಾರದ ಶೆಟ್ಟಿ, ತಾರಾ ಶೆಟ್ಟಿ, ಜೆಡಿಎಸ್ ಮುಖಂಡರಾದ ಪ್ರಶಾಂತ್ ಭಟ್ (ಕಡಬ), ಹರೀಶ್ ಶೆಟ್ಟಿ (ಶಕ್ತಿನಗರ), ನಜೀರ್ ಸಾಮಾಣೆಗೆ, ಜಾವೀದ್, ಚೇತನ್ ವೈ. ಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದು ಸಾರ್ವಜನಿಕರ ಮತ್ತು ವಿಧ್ಯಾರ್ಥಿ ಪೋಷಕರ ಬೇಡಿಕೆಗಳನ್ನು ಮುಂದಿರಿಸಿದ್ದರು
ಮಳೆಗಾಲದ ಸಂದರ್ಭದಲ್ಲಿ ಜಾರುವ ರಸ್ತೆಗಳು, ಗುಂಡಿಗಳು, ನೀರು ನಿಂತಿರುವ ರಸ್ತೆಗಳು ಹಾಗೂ ಕಡಿಮೆ ಗೋಚರತೆಯಂತಹ ಪ್ರತಿಕೂಲ ಪರಿಸ್ಥಿತಿಗಳ ನಡುವೆ ಸಾಮರ್ಥ್ಯ ಮೀರಿ ವಿದ್ಯಾರ್ಥಿಗಳನ್ನು ಒಂದೇ ವಾಹನದಲ್ಲಿ ಸಾಗಿಸುವುದು ಅತ್ಯಂತ ಅಪಾಯಕಾರಿಯಾಗಿದ್ದು, ಯಾವುದೇ ಅನಾಹುತ ಸಂಭವಿಸುವ ಮುನ್ನವೇ ಸಂಬಂಧಪಟ್ಟ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ನಿಯೋಗ ಒತ್ತಾಯಿಸಿತು.
ಜಿಲ್ಲೆಯಲ್ಲಿ ಸಂಚರಿಸುತ್ತಿರುವ ಹಲವು ಶಾಲಾ ವಾಹನಗಳು ಹಳೆಯದಾಗಿದ್ದು, ಅವುಗಳ ಬ್ರೇಕ್ ವ್ಯವಸ್ಥೆ, ಟೈರ್‌ಗಳ ಗುಣಮಟ್ಟ, ಸ್ಟೀರಿಂಗ್, ಎಂಜಿನ್, ವಿದ್ಯುತ್ ಸಂಪರ್ಕ, ತುರ್ತು ನಿರ್ಗಮನ ವ್ಯವಸ್ಥೆ ಸೇರಿದಂತೆ ಸುರಕ್ಷತಾ ಮಾನದಂಡಗಳನ್ನು ಸಮರ್ಪಕವಾಗಿ ಪಾಲಿಸುತ್ತಿವೆಯೇ ಎಂಬುದರ ಬಗ್ಗೆ ಸಮಗ್ರ ತಾಂತ್ರಿಕ ಪರಿಶೀಲನೆ ನಡೆಸಬೇಕು. ಸುರಕ್ಷತಾ ಮಾನದಂಡಗಳನ್ನು ಪೂರೈಸದ ವಾಹನಗಳ ಫಿಟ್ನೆಸ್ ಪ್ರಮಾಣಪತ್ರ ಹಾಗೂ ಪರವಾನಗಿಯನ್ನು ಅಮಾನತುಗೊಳಿಸಿ ರಸ್ತೆಗಿಳಿಯದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು.
ಮನವಿಯಲ್ಲಿ ಜಿಲ್ಲೆಯ ಎಲ್ಲಾ ಶಾಲಾ ಹಾಗೂ ಕಾಲೇಜು ವಾಹನಗಳ ಮೇಲೆ ವಿಶೇಷ ತಪಾಸಣಾ ಅಭಿಯಾನ ನಡೆಸುವುದು, ಅಧಿಕ ಪ್ರಯಾಣಿಕರನ್ನು ಸಾಗಿಸುವ ವಾಹನಗಳ ವಿರುದ್ಧ ಮೋಟಾರು ವಾಹನ ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಜರುಗಿಸುವುದು, 10 ವರ್ಷ ಅಥವಾ ಅದಕ್ಕಿಂತ ಹಳೆಯ ಶಾಲಾ ವಾಹನಗಳಿಗೆ ಕಡ್ಡಾಯ ಫಿಟ್ನೆಸ್ ಪರೀಕ್ಷೆ ನಡೆಸುವುದು, ಬ್ರೇಕ್, ಟೈರ್, ಲೈಟ್, ಸ್ಟೀರಿಂಗ್, ತುರ್ತು ನಿರ್ಗಮನ ದ್ವಾರ, ಅಗ್ನಿಶಾಮಕ ಸಾಧನ, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಜಿಪಿಎಸ್ ಹಾಗೂ ಸಿಸಿಟಿವಿ ಸೇರಿದಂತೆ ಎಲ್ಲಾ ಸುರಕ್ಷತಾ ವ್ಯವಸ್ಥೆಗಳ ಸಮಗ್ರ ಪರಿಶೀಲನೆ ನಡೆಸುವುದು, ಚಾಲಕರು ಮತ್ತು ಸಹಾಯಕರ ಚಾಲನಾ ಪರವಾನಗಿ, ಪೊಲೀಸ್ ಪರಿಶೀಲನೆ ಹಾಗೂ ವೈದ್ಯಕೀಯ ಅರ್ಹತಾ ದಾಖಲೆಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸುವುದು, ಶಾಲಾ ಆಡಳಿತ ಮಂಡಳಿಗಳಿಗೆ ಸುರಕ್ಷತಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡುವುದು, ಶಾಲೆಗಳು ಆರಂಭವಾಗುವ ಹಾಗೂ ಮುಕ್ತಾಯಗೊಳ್ಳುವ ವೇಳೆಯಲ್ಲಿ ಸಾರಿಗೆ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಜಂಟಿ ತಪಾಸಣಾ ಕಾರ್ಯಾಚರಣೆಗಳನ್ನು ನಿಯಮಿತವಾಗಿ ನಡೆಸುವುದು ಹಾಗೂ ಸಾರ್ವಜನಿಕರ ದೂರುಗಳಿಗಾಗಿ ವಿಶೇಷ ಸಹಾಯವಾಣಿ ಅಥವಾ ಆನ್‌ಲೈನ್ ದೂರು ವ್ಯವಸ್ಥೆ ಜಾರಿಗೊಳಿಸುವಂತೆ ಪ್ರಮುಖ ಬೇಡಿಕೆಗಳನ್ನು ಮುಂದಿರಿಸಲಾಯಿತು.
“ವಿದ್ಯಾರ್ಥಿಗಳ ಜೀವ ಮತ್ತು ಸುರಕ್ಷತೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯಕ್ಕೊಳಗಾಗಬಾರದು. ಒಂದು ಸಣ್ಣ ಅಜಾಗರೂಕತೆಯೂ ಅಮೂಲ್ಯ ಜೀವಹಾನಿಗೆ ಕಾರಣವಾಗುವ ಸಾಧ್ಯತೆ ಇರುವುದರಿಂದ, ಈ ಮನವಿಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ತಕ್ಷಣ ಅಗತ್ಯ ಕ್ರಮ ಕೈಗೊಳ್ಳಬೇಕು” ಎಂದು ಜೆಡಿಎಸ್ ನಿಯೋಗ ಅಧಿಕಾರಿಗಳನ್ನು ಒತ್ತಾಯಿಸಿತು.
ಮನವಿ ಸ್ವೀಕರಿಸಿದ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಅವರು, ಶಾಲಾ ವಾಹನಗಳ ಸುರಕ್ಷತೆಗೆ ಸಂಬಂಧಿಸಿದಂತೆ ನಿಯೋಗ ವ್ಯಕ್ತಪಡಿಸಿರುವ ಕಳವಳವನ್ನು ಗಂಭೀರವಾಗಿ ಪರಿಗಣಿಸಲಾಗುವುದು. ವಿದ್ಯಾರ್ಥಿಗಳ ಸುರಕ್ಷತೆಗೆ ಯಾವುದೇ ರೀತಿಯ ರಾಜಿ ಮಾಡಿಕೊಳ್ಳುವುದಿಲ್ಲ. ನಿಯಮ ಉಲ್ಲಂಘಿಸುವ ವಾಹನಗಳ ವಿರುದ್ಧ ವಿಶೇಷ ತಪಾಸಣಾ ಕಾರ್ಯಾಚರಣೆ ನಡೆಸಿ, ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಿಯೋಗಕ್ಕೆ ಭರವಸೆ ನೀಡಿದರು.






