

ಝಡ್ ಶ್ರೇಣಿಯ ಭದ್ರತೆ ಹೊಂದಿರುವ ಕೇಂದ್ರ ಸಚಿವ ಹಾಗೂ ಲೋಕ ಜನಶಕ್ತಿ ಪಾರ್ಟಿ (ರಾಮ್ ವಿಲಾಸ್) ಅಧ್ಯಕ್ಷ ಚಿರಾಗ್ ಪಾಸ್ವಾನ್ ಅವರಿಗೆ ಅಂಚೆ ಮೂಲಕ ಬಂದ ಅನಾಮಧೇಯ ಪತ್ರವೊಂದರಲ್ಲಿ ‘ತೀವ್ರಗಾಮಿ ಉಗ್ರರು ಶೀಘ್ರದಲ್ಲೇ ನಿಮ್ಮನ್ನು ಕೊಲೆ ಮಾಡುತ್ತಾರೆ’ ಎಂದು ಜೀವ ಬೆದರಿಕೆ ಹಾಕಲಾಗಿದೆ. ಈ ಬೆದರಿಕೆ ಪತ್ರ ಬಂದ ತಕ್ಷಣ ಅದನ್ನು ಗಂಭೀರವಾಗಿ ಪರಿಗಣಿಸಿರುವ ಚಿರಾಗ್ ಪಾಸ್ವಾನ್ ಅವರ ಕಚೇರಿ ಕೇಂದ್ರ ಗೃಹ ಕಾರ್ಯದರ್ಶಿಯವರಿಗೆ ಪತ್ರ ಬರೆದಿದೆ. ಈ ಬೆದರಿಕೆ ಪತ್ರದ ಮೂಲ ಮತ್ತು ಸತ್ಯಾಸತ್ಯತೆಯನ್ನು ತುರ್ತಾಗಿ ತನಿಖೆ ಮಾಡುವಂತೆ ಹಾಗೂ ಸಚಿವರ ಭದ್ರತಾ ವ್ಯವಸ್ಥೆಯನ್ನು ಮರುಪರಿಶೀಲಿಸುವಂತೆ ಕೋರಿದೆ.
ಕೇಂದ್ರ ಗೃಹ ಕಾರ್ಯದರ್ಶಿಯವರಿಗೆ ಬರೆದಿರುವ ಪತ್ರದಲ್ಲಿ ಚಿರಾಗ್ ಪಾಸ್ವಾನ್ ಅವರ ಹೆಚ್ಚುವರಿ ವೈಯಕ್ತಿಕ ಕಾರ್ಯದರ್ಶಿ ಆಲೋಕ್ ಕುಮಾರ್, “ಕೇಂದ್ರ ಗೃಹ ಸಚಿವಾಲಯದಿಂದ ಝಡ್ ಶ್ರೇಣಿಯ ಭದ್ರತೆ ಪಡೆಯುತ್ತಿರುವ ಕೇಂದ್ರ ಆಹಾರ ಸಂಸ್ಕರಣಾ ಉದ್ಯಮಗಳ ಸಚಿವರ ವೈಯಕ್ತಿಕ ಭದ್ರತೆಗೆ ಸಂಬಂಧಿಸಿದ ಗಂಭೀರ ವಿಚಾರವನ್ನು ನಿಮ್ಮ ತುರ್ತು ಗಮನಕ್ಕೆ ತರಲು ನನಗೆ ನಿರ್ದೇಶಿಸಲಾಗಿದೆ” ಎಂದು ಉಲ್ಲೇಖಿಸಿದ್ದಾರೆ.
ಪತ್ರದ ಪ್ರಕಾರ, 2 ಮೊಬೈಲ್ ಸಂಖ್ಯೆಗಳನ್ನು ಒಳಗೊಂಡ ಅನಾಮಧೇಯ ಪತ್ರವೊಂದು ಇಂದು ಸಚಿವಾಲಯಕ್ಕೆ ತಲುಪಿದೆ. “ಅದನ್ನು ತೆರೆದು ನೋಡಿದಾಗ, ಅದರಲ್ಲಿ ಕೇಂದ್ರ ಸಚಿವರ ಜೀವಕ್ಕೆ ನೇರ ಬೆದರಿಕೆ ಹಾಕಿರುವುದು ಕಂಡುಬಂದಿದೆ. ಆ ಬೆದರಿಕೆಯಲ್ಲಿ ‘ತೀವ್ರಗಾಮಿ ಉಗ್ರರಿಂದ ಶೀಘ್ರದಲ್ಲೇ ನಿಮ್ಮ ಹತ್ಯೆಯಾಗಲಿದೆ’ ಎಂದು ಬರೆಯಲಾಗಿದೆ” ಎಂದು ಆಲೋಕ್ ಕುಮಾರ್ ತಿಳಿಸಿದ್ದಾರೆ. ಪರಿಶೀಲನೆಗಾಗಿ ಮೂಲ ಬೆದರಿಕೆ ಪತ್ರವನ್ನೂ ಗೃಹ ಸಚಿವಾಲಯದ ಪತ್ರದೊಂದಿಗೆ ಲಗತ್ತಿಸಲಾಗಿದೆ.







