

ಬಂಟ್ವಾಳ : ಖಿದ್ಮತುಲ್ ಮಸಾಕೀನ್ ಯಂಗ್ ಮೆನ್ಸ್ ಅಸೋಸಿಯೇಷನ್ (ದಿ ಸೋಶಿಯಲ್ ಸರ್ವಿಸ್ ಫಾರ್ ಮಾಸ್), ಕೊಳಕೆ ಇದರ ವತಿಯಿಂದ ಪೈಗಂಬರ್ ಮುಹಮ್ಮದ್ ಮುಸ್ತಫಾ ﷺ ಅವರ ಜನ್ಮದಿನಾಚರಣೆಯ ಪ್ರಯುಕ್ತ ಮೌಲೀದ್ ಹಾಗೂ ಬೃಹತ್ ಬುರ್ದಾ ಮಜ್ಲಿಸ್ ಕಾರ್ಯಕ್ರಮವನ್ನು ಸೆಪ್ಟೆಂಬರ್ 10ರಂದು ಕೊಳಕೆ ಜಂಕ್ಷನ್‌ನಲ್ಲಿ ಆಯೋಜಿಸಲಾಗಿದೆ.
ಗುರುವಾರ ಮಗ್ರಿಬ್ ನಮಾಝ್ ಬಳಿಕ ನಡೆಯಲಿರುವ ಕಾರ್ಯಕ್ರಮದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ಹಾಗೂ ವಿದ್ಯಾರ್ಥಿವೇತನ ವಿತರಣೆ ನಡೆಯಲಿದೆ. ಮಹಿಳೆಯರಿಗಾಗಿ ಪ್ರತ್ಯೇಕ ಸ್ಥಳಾವಕಾಶ ಕಲ್ಪಿಸಲಾಗಿದೆ.
ಸಂಘಟನೆಯ ವತಿಯಿಂದ ನಡೆಯುತ್ತಿರುವ ಸಾರ್ವಜನಿಕ ಅನ್ನಸಂತರ್ಪಣೆ ಸತತ 18ನೇ ವರ್ಷಕ್ಕೆ ಕಾಲಿಟ್ಟಿರುವುದು ವಿಶೇಷವಾಗಿದೆ. ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಸಮಾಜದ ದುರ್ಬಲ ವರ್ಗಗಳ ನೆರವಿಗೆ ಸದಾ ಸ್ಪಂದಿಸುತ್ತಿರುವ ಸಂಘಟನೆ, ಕಳೆದ 17 ವರ್ಷಗಳಿಂದ ವಿವಿಧ ಜನಪರ ಹಾಗೂ ಸಮಾಜಮುಖಿ ಸೇವಾ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದೆ.
ಬಡ ಕುಟುಂಬಗಳ ಹೆಣ್ಣುಮಕ್ಕಳ ವಿವಾಹಕ್ಕೆ ಆರ್ಥಿಕ ನೆರವು, ನಿರ್ಗತಿಕರು ಹಾಗೂ ಅಗತ್ಯವಿರುವವರಿಗೆ ಧನಸಹಾಯ, ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಗಳನ್ನು ಸಂಘಟನೆ ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ.

ಕಾರ್ಯಕ್ರಮಕ್ಕೆ ಸರ್ವರಿಗೂ ಆದರದ ಸ್ವಾಗತವಿದೆ ಎಂದು ಸಂಘಟನೆಯ ಅಧ್ಯಕ್ಷರಾದ ಇಸ್ಮಾಯಿಲ್ ಪಂಜಾಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






