September 25, 2026
WhatsApp Image 2025-05-31 at 11.11.16 AM

ಮಂಗಳೂರು: ನಗರದ ಪಾಂಡೇಶ್ವರದಲ್ಲಿರುವ ಶ್ರೀನಿವಾಸ ವಿಶ್ವವಿದ್ಯಾಲಯದ (Srinivas University) ಬಿಬಿಎ ಪೋರ್ಟ್ ಶಿಪ್ಪಿಂಗ್ ಲಾಜಿಸ್ಟಿಕ್ಸ್‌ ವಿಭಾಗದ ವಿದ್ಯಾರ್ಥಿಗಳು ಹಾಗೂ ಅವರ ಸ್ನೇಹಿತರ ಮೇಲೆ ಹಿರಿಯ ವಿದ್ಯಾರ್ಥಿಗಳ ಗುಂಪೊಂದು ಅಮಾನುಷವಾಗಿ ರ‍್ಯಾಗಿಂಗ್‌ ನಡೆಸಿ, ಕೊಲೆ ಬೆದರಿಕೆಯೊಡ್ಡಿರುವ ತಡವಾಗಿ ಬೆಳಕಿಗೆ ಬಂದಿದೆ.

ಸಂತ್ರಸ್ತ ವಿದ್ಯಾರ್ಥಿ ನೀಡಿದ ದೂರಿನನ್ವಯ ಮಂಗಳೂರು ನಗರ ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಕೇರಳದ ತ್ರಿಶೂರ್ ಮೂಲದ 19 ವರ್ಷದ ಪ್ರಥಮ ವರ್ಷದ ಬಿಬಿಎ ವಿದ್ಯಾರ್ಥಿ ಹಾಗೂ ಅವರ ಸಹಪಾಠಿ ಈ ಅಮಾನುಷ ರ‍್ಯಾಗಿಂಗ್‌ಗೆ ಒಳಗಾದವರಾಗಿದ್ದಾರೆ.

ಪೋಲಿಸ್ ಕಮಿಷನರ್ ನೀಡಿದ ಮಾಹಿತಿಯಂತೆ, ಸೆಪ್ಟೆಂಬರ್ 19 ರಂದು ಮಧ್ಯಾಹ್ನ ಸಂತ್ರಸ್ತ ವಿದ್ಯಾರ್ಥಿಗಳು ಕಾಲೇಜಿನ ಹೊರಗೆ ನಡೆದುಕೊಂಡು ಹೋಗುತ್ತಿದ್ದಾಗ ಅಡ್ಡಗಟ್ಟಿದ ಸೀನಿಯರ್ಸ್ ಗುಂಪು, ಅವರನ್ನು ಬಲವಂತವಾಗಿ ಬೈಕ್‌ನಲ್ಲಿ ಅಪಹರಿಸಿಕೊಂಡು ಹೋಗಿದೆ. ಬಳಿಕ ನಿರ್ಜನ ಮನೆಯೊಂದರ ಕೊಠಡಿಯಲ್ಲಿ ಕೂಡಿಹಾಕಿ ಹೊರಗಿನಿಂದ ಲಾಕ್ ಮಾಡಿದ್ದಾರೆ. ಕೊಠಡಿಯಲ್ಲಿ ಇಬ್ಬರೂ ಜೂನಿಯರ್ ವಿದ್ಯಾರ್ಥಿಗಳ ಬಟ್ಟೆಗಳನ್ನು ಬಿಚ್ಚಿಸಿ ಕೇವಲ ಚಡ್ಡಿಯಲ್ಲಿ ನಿಲ್ಲಿಸಿದ ಆರೋಪಿಗಳು, ಅವರು ಚೀರದಂತೆ ಬಾಯಿಗೆ ಬಟ್ಟೆ ತುರುಕಿದ್ದಾರೆ. ನಂತರ ಬೆಲ್ಟ್ ಹಾಗೂ ಹ್ಯಾಂಗರ್‌ಗಳಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಈ ವೇಳೆ ಆರೋಪಿಯೊಬ್ಬ ಕೊಲ್ಲುವ ಉದ್ದೇಶದಿಂದಲೇ ಅಪಾಯಕಾರಿ ‘ಕಬ್ಬಿಣದ ಪಂಚ್’ ನಿಂದ ಕುತ್ತಿಗೆ ಹಾಗೂ ತಲೆಗೆ ಗುರಿಯಿಟ್ಟು ಭೀಕರವಾಗಿ ಹಲ್ಲೆ ನಡೆಸಿದ್ದಾನೆ. ಹಲ್ಲೆಯಿಂದ ಬಸವಳಿದು ಕುಡಿಯಲು ನೀರು ಕೇಳಿದಾಗ ಕಲುಷಿತ ನೀರನ್ನು ತಂದು ಮೈಮೇಲೆ ಚೆಲ್ಲಿ ವಿಕೃತ ಆನಂದ ಅನುಭವಿಸಿದ್ದಾರೆ. ಈ ಇಡೀ ಅಮಾನುಷ ಕೃತ್ಯವನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ.

ಸಂಜೆ 6 ಗಂಟೆಯವರೆಗೆ ಕೂಡಿಹಾಕಿ ದೌರ್ಜನ್ಯ ಎಸಗಿದ್ದಲ್ಲದೆ, “ಈ ವಿಷಯವನ್ನು ಪೋಲೀಸರಿಗೆ ತಿಳಿಸಿದರೆ ಕಾಲೇಜಿನಲ್ಲಿ ನಿಮ್ಮನ್ನು ಚಾಕುವಿನಿಂದ ತುಂಡು ತುಂಡಾಗಿ ಕತ್ತರಿಸುತ್ತೇವೆ” ಎಂದು ಜೀವಬೆದರಿಕೆ ಹಾಕಿದ್ದರು. ಅಲ್ಲದೆ ತರಗತಿಗೆ ಬರುವಾಗ “ಕ್ಲೀನ್ ಶೇವ್ ಮಾಡಿಕೊಂಡು ಬರಬೇಕು, ಶೂ ಹಾಕಬಾರದು” ಎಂದು ಫರ್ಮಾನು ಹೊರಡಿಸಿದ್ದರು. ಇದರಿಂದ ತೀವ್ರ ಭಯಭೀತರಾದ ವಿದ್ಯಾರ್ಥಿಗಳು ಊರಿಗೆ ತೆರಳಿ ಪೋಷಕರಿಗೆ ವಿಷಯ ತಿಳಿಸಿದ್ದು, ಕುಟುಂಬಸ್ಥರ ಧೈರ್ಯದ ಮೇರೆಗೆ ಮಂಗಳೂರಿಗೆ ಮರಳಿ ದೂರು ನೀಡಿದ್ದಾರೆ.

ಸಂತ್ರಸ್ತ ವಿದ್ಯಾರ್ಥಿ ನೀಡಿದ ದೂರಿನ ಆಧಾರದ ಮೇಲೆ ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಯಲ್ಲಿ 9 ಮಂದಿ ಸೀನಿಯರ್ ವಿದ್ಯಾರ್ಥಿಗಳಾದ ನಾಸೀದ್ ಅಮೀರ್, ಆದಿಲ್ ಎಂ, ಅರ್ಶಕ್, ಅನೀಶ್, ಉವೈಸ್, ರೋಹನ್ ರಮೇಶ್, ಆದಿಲ್ ವಿ.ಪಿ, ರೆಹಾನ್ ಎಂ.ಪಿ ಹಾಗೂ ಶಿನಾಸ್ ವಿರುದ್ಧ ಕೇಸ್ ಜಡಿಯಲಾಗಿದೆ. ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

About The Author

Leave a Reply