September 7, 2026
WhatsApp Image 2026-09-07 at 5.11.56 PM

ಮಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಡೆಸುತ್ತಿರುವ ಪಾದಯಾತ್ರೆಯು ಜನಸಾಮಾನ್ಯರಿಗೋಸ್ಕರ ಅಲ್ಲ, ಅದು ಸಂಪೂರ್ಣವಾಗಿ ‘ಪೈಡ್ ಪಾದಯಾತ್ರೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಪಾದಯಾತ್ರೆಯಲ್ಲಿ ಜನಸಾಮಾನ್ಯರ ಪಾಲ್ಗೊಳ್ಳುವಿಕೆಯಾಗಲಿ ಅಥವಾ ಮನ್ನಣೆಯಾಗಲಿ ಇಲ್ಲ. “ಪೈಡ್ ನ್ಯೂಸ್ ಮಾದರಿಯಲ್ಲೇ ಈ ಪಾದಯಾತ್ರೆಯನ್ನೂ ಯೋಜಿಸಲಾಗಿದೆ. ಬಿಜೆಪಿ ನಾಯಕತ್ವದಲ್ಲೇ ಗೊಂದಲವಿದ್ದು, ಅವರ ಪಕ್ಷದ ಹಲವು ಪ್ರಮುಖ ನಾಯಕರೇ ಇದರಲ್ಲಿ ಭಾಗವಹಿಸಿಲ್ಲ,” ಎಂದು ಲೇವಡಿ ಮಾಡಿದರು.

“ಕೇವಲ ‘ಮರಿ ಯಡಿಯೂರಪ್ಪ’ನವರ ನಾಯಕತ್ವವನ್ನು ಪುನಃಸ್ಥಾಪಿಸಲು ಹಾಗೂ ನಿರುದ್ಯೋಗಿ ನಾಯಕರಿಗೆ ಕೆಲಸ ನೀಡಲು ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆಯೇ ವಿನಃ ಜನರಿಗಾಗಿ ಅಲ್ಲ. ಜನಸಾಮಾನ್ಯರ ಮೇಲೆ ನಿಜವಾದ ಕಾಳಜಿ ಇದ್ದಿದ್ದರೆ, ಈ ವಿಷಯಗಳನ್ನು ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ಚರ್ಚಿಸಬಹುದಿತ್ತು,” ಎಂದು ಹರಿಪ್ರಸಾದ್ ಪ್ರಶ್ನಿಸಿದರು.

ಬಿಜೆಪಿಯ ಭ್ರಷ್ಟಾಚಾರದ ಆರೋಪಗಳಿಗೆ ಕಠಿಣವಾಗಿ ತಿರುಗೇಟು ನೀಡಿದ ಅವರು, “ಗಣಿಗಾರಿಕೆ ಕಳ್ಳತನ ಮಾಡಿ, ಭ್ರಷ್ಟಾಚಾರದ ಕಾಂಟ್ರಾಕ್ಟ್ ತೆಗೆದುಕೊಂಡು ನಾಲ್ಕೈದು ವರ್ಷ ಜೈಲಿನಲ್ಲಿದ್ದವರು ಇಂದು ನಮಗೆ ಭ್ರಷ್ಟಾಚಾರದ ಪಾಠ ಮಾಡುತ್ತಿದ್ದಾರೆ. ವಿಶ್ವದಲ್ಲೇ ಪ್ರಥಮ ಬಾರಿಗೆ ಚೆಕ್ ಮೂಲಕ ಲಂಚ ಪಡೆದು ಜೈಲು ಪಾಲಾದ ಇತಿಹಾಸ ಸೃಷ್ಟಿಸಿದವರು ಇವರು. ಸತ್ಯ ಹರಿಶ್ಚಂದ್ರನ ಮೊಮ್ಮಕ್ಕಳಂತೆ ಮಾತನಾಡುವುದನ್ನು ಜನ ಒಪ್ಪುವುದಿಲ್ಲ,” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಗಳು ನಡೆಸಿದ ವೈಮಾನಿಕ ಸಮೀಕ್ಷೆಯನ್ನು ಸಮರ್ಥಿಸಿಕೊಂಡ ಅವರು, “ಕಂದಾಯ ಸಚಿವರು ಈಗಾಗಲೇ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದಾರೆ. ಅದನ್ನು ಖುದ್ದು ಪರಿಶೀಲಿಸಲು ಸಿಎಂ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ದೇಶದ ‘ವಿಶ್ವಗುರು’ ಪ್ರಧಾನಿ ಮೋದಿ ಅವರು ಮಹಾರಾಷ್ಟ್ರ, ಆಂಧ್ರದಲ್ಲಿ ಪ್ರವಾಹ ಬಂದಾಗ ವೈಮಾನಿಕ ಸಮೀಕ್ಷೆ ನಡೆಸಲಿಲ್ಲವೇ? ಆದರೆ ಕರ್ನಾಟಕಕ್ಕೆ ಅವರು ಬರಲೇ ಇಲ್ಲ, ಭೇಟಿಗೆ ಸಮಯವನ್ನೂ ನೀಡಲಿಲ್ಲ. ಇಂತಹವರು ನಮ್ಮ ಸರ್ಕಾರದ ಬಗ್ಗೆ ಮಾತನಾಡಲು ಅರ್ಹರಲ್ಲ,” ಎಂದರು.

ಸೆಪ್ಟೆಂಬರ್ 18ರಂದು ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕರಾವಳಿ ಭಾಗದ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಲು ಸಿಎಂ ಅವರನ್ನು ಒತ್ತು ನೀಡುವುದಾಗಿ ತಿಳಿಸಿದರು.
ರಾಹುಲ್ ಗಾಂಧಿ ಅವರ ಆಶಯದಂತೆ ಸಾಮಾಜಿಕ ಮತ್ತು ಶೈಕ್ಷಣಿಕ ಜಾತಿ ಗಣತಿ ವರದಿ ಜಾರಿಗೆ ಸರ್ಕಾರ ಬದ್ಧವಾಗಿದೆ. ಕೇಂದ್ರದ ಸೆನ್ಸಸ್‌ನಲ್ಲೂ ಜಾತಿ ಗಣತಿಯ ಕಾಲಂ ಸೇರಿಸಬೇಕು ಎಂಬುದು ಕಾಂಗ್ರೆಸ್ ನಿಲುವು ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ, ‘ಸಿದ್ದರಾಮಯ್ಯನವರೇ ಮುಂದಿನ ಸಿಎಂ’ ಎಂದಿದ್ದ ಪ್ರದೀಪ್ ಈಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿ, “ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಅನಿಸಿಕೆ ಹೇಳುವ ಸ್ವಾತಂತ್ರ್ಯವಿದೆ. ನಾವು ನಾಗ್ಪುರ ಯುನಿವರ್ಸಿಟಿಯಲ್ಲಿ ತರಬೇತಿ ಪಡೆದವರಲ್ಲ. ಅದು ಅವರ ವೈಯಕ್ತಿಕ ಅನಿಸಿಕೆಯೇ ಹೊರತು ಪಕ್ಷದ ಅಧಿಕೃತ ತೀರ್ಮಾನವಲ್ಲ,” ಎಂದು ಸ್ಪಷ್ಟಪಡಿಸಿದರು.

About The Author

Leave a Reply