

ಹರೇಕಳ / ಮಂಗಳೂರು: ಕಿತ್ತಳೆ ಹಣ್ಣು ಮಾರಿ, ತನ್ನ ಹೊಟ್ಟೆ ಬಟ್ಟೆ ಕಟ್ಟಿ ಶಾಲೆ ಕಟ್ಟಿದ ಕರ್ನಾಟಕದ ಹೆಮ್ಮೆ, ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿ ಪಡೆದ ಹರೇಕಳ ಹಾಜಬ್ಬ ಅವರಿಗೆ ಚುನಾವಣಾ ಆಯೋಗದ SIR – Special Intensive Revision ನೋಟಿಸ್ ಬಂದಿದೆ ಎಂಬ ಸುದ್ದಿ ಇಡೀ ರಾಜ್ಯದಲ್ಲೇ ಸಂಚಲನ ಮೂಡಿಸಿದೆ.
ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಪಡೆದ ವ್ಯಕ್ತಿಗೆ, ರಾಷ್ಟ್ರಪತಿ ಭವನಕ್ಕೆ ಹೋಗಿ ಪ್ರಶಸ್ತಿ ಪಡೆದ ವ್ಯಕ್ತಿಗೆ, ಪ್ರಧಾನಿ ಮೋದಿಯವರು ಮೆಚ್ಚಿ ಕರೆದು ಮಾತನಾಡಿದ ವ್ಯಕ್ತಿಗೆ ಇಂದು ನೀವು ಈ ದೇಶದ ಪ್ರಜೆಯೇ ಎಂದು ಸಾಬೀತುಪಡಿಸಿ ಎಂದು ನೋಟಿಸ್ ಕೊಡಬೇಕಾ?
ಇದಕ್ಕಿಂತ ದೊಡ್ಡ ದುರಂತ ಬೇರೆ ಇದೆಯೇ?

ಹಾಜಬ್ಬರು ಯಾರು?
ಯಾವುದೇ ಶಾಲೆಗೆ ಹೋಗದ ಅನಕ್ಷರಸ್ಥ. ದಿನಪೂರ್ತಿ ಮಂಗಳೂರಿನ ಬಸ್ ನಿಲ್ದಾಣದಲ್ಲಿ ಕಿತ್ತಳೆ ಮಾರುವ ವ್ಯಕ್ತಿ. ತನ್ನ ಊರಿನ ಮಕ್ಕಳಿಗೆ ಶಾಲೆ ಇಲ್ಲವೆಂದು ತನ್ನ ಜೇಬಿನ ದುಡ್ಡಿನಿಂದಲೇ ಶಾಲೆ ಆರಂಭಿಸಿದ ಮಹಾನ್ ಚೇತನ. ಸರ್ಕಾರವೇ ಅವರನ್ನು ಗುರುತಿಸಿ ಪದ್ಮಶ್ರೀ ಕೊಟ್ಟಿದೆ. ಅವರ ಹೆಸರಿನಲ್ಲಿ ಸರ್ಕಾರಿ ದಾಖಲೆಗಳು, ಆಧಾರ್, ವೋಟರ್ ಐಡಿ, ಬ್ಯಾಂಕ್ ಖಾತೆ ಎಲ್ಲವೂ ಇದೆ. ಇಂತಹ ವ್ಯಕ್ತಿಗೇ ನೋಟಿಸ್ ಬರುತ್ತೆ ಎಂದರೆ…
ಹಾಗಾದರೆ ನಮ್ಮಂತ ಸಾಮಾನ್ಯ ಬಡ ಜನರ ಕತೆ ಏನು?
ದಿನಗೂಲಿ ಮಾಡುವವರು, ರಿಕ್ಷಾ ಎಳೆಯುವವರು, ಕೂಲಿ ಕಾರ್ಮಿಕರು, ಗುಡಿಸಲಿನಲ್ಲಿ ವಾಸಿಸುವವರ ಬಳಿ ದಾಖಲೆ ಎಲ್ಲಿಂದ ಬರಬೇಕು? ಹಾಜಬ್ಬರಿಗೇ ದಾಖಲೆ ಕೇಳುವಾಗ, ಕೋಟೆಕಾರು, ಹರೇಕಳ, ಉಳ್ಳಾಲದ ಬಡ ಮುಸ್ಲಿಂ, ದಲಿತ, ಹಿಂದುಳಿದ ಕುಟುಂಬಗಳ ಗತಿ ಏನು? ಎಂದು ರಿಯಾಝ್ ಹರೇಕಳ ಪ್ರಶ್ನಿಸಿದ್ದಾರೆ.
SIR ಹೆಸರಿನಲ್ಲಿ ನಡೆಯುತ್ತಿರುವುದು ಮತದಾರರ ಪಟ್ಟಿ ಪರಿಷ್ಕರಣೆಯೋ ಅಥವಾ ಬಡವರನ್ನು, ಅಲ್ಪಸಂಖ್ಯಾತರನ್ನು, ಹಿಂದುಳಿದವರನ್ನು ಮತದಾನದ ಹಕ್ಕಿನಿಂದ ವಂಚಿಸುವ ಹುನ್ನಾರವೋ ಎಂಬ ಅನುಮಾನ ಮೂಡುತ್ತಿದೆ.
ಪದ್ಮಶ್ರೀ ಪುರಸ್ಕೃತರಿಗೆ ಒಂದು ನೋಟಿಸ್ ಕೊಟ್ಟು ನೀವು ದಾಖಲೆ ತನ್ನಿ ಎನ್ನಬಹುದು. ಆದರೆ ಓದೂ ಬರೆಯೂ ಬಾರದ, ಕೂಲಿ ಮಾಡಿ ಜೀವನ ಸಾಗಿಸುವ ಸಾಮಾನ್ಯ ಜನರು ತಾಲೂಕು ಕಚೇರಿ, ಜಿಲ್ಲಾಧಿಕಾರಿ ಕಚೇರಿಗೆ ಅಲೆದು ದಾಖಲೆ ತರುವುದು ಹೇಗೆ? ಇದಕ್ಕೆ ಯಾರು ಹೊಣೆ?
ಚುನಾವಣಾ ಆಯೋಗ ಕೂಡಲೇ ಎಚ್ಚೆತ್ತುಕೊಳ್ಳಬೇಕು. ಹರೇಕಳ ಹಾಜಬ್ಬರಂತಹ ಗೌರವಾನ್ವಿತ ವ್ಯಕ್ತಿಗೆ ನೀಡಿರುವ ನೋಟಿಸ್ ಅನ್ನು ಕೂಡಲೇ ಹಿಂಪಡೆಯಬೇಕು. ಮತ್ತು SIR ಪ್ರಕ್ರಿಯೆಯಲ್ಲಿ ಬಡವರಿಗೆ ತೊಂದರೆಯಾಗದಂತೆ ಸರಳ, ಮಾನವೀಯ ನಿಯಮಗಳನ್ನು ಜಾರಿಗೆ ತರಬೇಕು.
ಇಲ್ಲದಿದ್ದರೆ ಇದು ಕೇವಲ ಹಾಜಬ್ಬರಿಗೆ ನೀಡಿದ ನೋಟಿಸ್ ಆಗುವುದಿಲ್ಲ, ಈ ದೇಶದ ಪ್ರಾಮಾಣಿಕ ಬಡ ನಾಗರಿಕರೆಲ್ಲರಿಗೂ ನೀಡಿದ ನೋಟಿಸ್ ಆಗುತ್ತದೆ.
ವರದಿ
: ರಿಯಾಝ್ ಹರೇಕಳ ✍️






