September 8, 2026
WhatsApp Image 2026-09-08 at 4.20.07 PM

ಮಂಗಳೂರು: SIR ಹೆಸರಿನಲ್ಲಿ ಅರ್ಹ ಮತದಾರರ ಮತದಾನದ ಹಕ್ಕನ್ನು ಪ್ರಶ್ನಿಸುವ, ಗೊಂದಲ ಸೃಷ್ಟಿಸುವ ಅಥವಾ ಅನ್ಯಾಯವಾಗಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಡುವ ಯಾವುದೇ ಪ್ರಯತ್ನವನ್ನು SDPI ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಹಾಗೂ ಮತದಾರರನ್ನು ಭಯಭೀತಿಗೊಳಿಸುವ ಯಾವುದೇ ಪ್ರಯತ್ನಕ್ಕೆ ಕಾನೂನು ಮತ್ತು ಪ್ರಜಾಸತ್ತಾತ್ಮಕ ಹೋರಾಟದ ಮೂಲಕ ತಕ್ಕ ಉತ್ತರ ನೀಡಲಿದೆ ಎಂದು SDPI ಮಂಗಳೂರು ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ ಎಚ್ಚರಿಸಿದ್ದಾರೆ.

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಎಂಬುದು ಮತದಾರರ ಪಟ್ಟಿಯನ್ನು ಶುದ್ಧೀಕರಿಸುವ ಹೆಸರಿನಲ್ಲಿ ಅರ್ಹ ನಾಗರಿಕರ ಹಕ್ಕುಗಳನ್ನು ದುರ್ಬಲಗೊಳಿಸುವ ರಾಜಕೀಯ ಅಸ್ತ್ರವಾಗಬಾರದು. ಚುನಾವಣಾ ಪ್ರಕ್ರಿಯೆಯ ಹೆಸರಿನಲ್ಲಿ ಜನರಲ್ಲಿ ಭಯ, ಗೊಂದಲ ಮತ್ತು ಅನಿಶ್ಚಿತತೆ ಸೃಷ್ಟಿಸುವ ಬದಲು, ಪ್ರತಿಯೊಬ್ಬ ಅರ್ಹ ಮತದಾರನಿಗೂ ತನ್ನ ಹಕ್ಕನ್ನು ಸಾಬೀತುಪಡಿಸಲು ನ್ಯಾಯಸಮ್ಮತ ಅವಕಾಶ ನೀಡಬೇಕು.


SIR ನೋಟಿಸ್‌ಗಳನ್ನು ಪಡೆದಿರುವ ಹಲವಾರು ಮತದಾರರಲ್ಲಿ ದಾಖಲೆಗಳ ಕುರಿತು ಗೊಂದಲ, ವಿಚಾರಣೆಯ ಪ್ರಕ್ರಿಯೆಯ ಬಗ್ಗೆ ಆತಂಕ ಹಾಗೂ ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಉಳಿಯುತ್ತದೆಯೇ ಎಂಬ ಅನುಮಾನ ಮೂಡಿದೆ. ಇಂತಹ ಗೊಂದಲಕ್ಕೆ ಕಾರಣವಾಗುವ ಯಾವುದೇ ಆಡಳಿತಾತ್ಮಕ ಪ್ರಕ್ರಿಯೆ ಜನಸ್ನೇಹಿ ಮತ್ತು ಪಾರದರ್ಶಕವಾಗಿರಬೇಕು.
ಒಬ್ಬ ಅರ್ಹ ಮತದಾರನ ಹೆಸರನ್ನು ಪಟ್ಟಿಯಿಂದ ಅಳಿಸುವುದು ಕೇವಲ ಆಡಳಿತಾತ್ಮಕ ಕ್ರಮವಲ್ಲ; ಅದು ಆ ನಾಗರಿಕನ ಮತದಾನದ ಹಕ್ಕಿನ ಮೇಲಿನ ನೇರ ಪರಿಣಾಮವಾಗಿದೆ. ಬಡವರು, ಕಾರ್ಮಿಕರು, ವಲಸೆ ಕಾರ್ಮಿಕರು, ಬಾಡಿಗೆ ಮನೆಗಳಲ್ಲಿ ವಾಸಿಸುವವರು, ಹಿರಿಯ ನಾಗರಿಕರು ಹಾಗೂ ದಾಖಲೆಗಳ ಸಮಸ್ಯೆ ಎದುರಿಸುತ್ತಿರುವ ಜನರನ್ನು ಪ್ರಕ್ರಿಯೆಯ ಗೊಂದಲಕ್ಕೆ ಸಿಲುಕಿಸಿ ಅವರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಬಾರದು.
‘SIR’ ಹೆಸರಿನಲ್ಲಿ ಮತದಾರರ ಹಕ್ಕಿನ ರಾಜಕೀಯ ನಡೆಸಲು ಬಿಡುವುದಿಲ್ಲ

ಚುನಾವಣೆ ಎಂದರೆ ಕೇವಲ ಮತಪೆಟ್ಟಿಗೆ ಮತ್ತು ಮತದಾನದ ದಿನವಲ್ಲ. ಪ್ರತಿಯೊಬ್ಬ ಅರ್ಹ ನಾಗರಿಕನ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದು ಪ್ರಜಾಪ್ರಭುತ್ವದ ಮೂಲಭೂತ ಅವಶ್ಯಕತೆ. SIR ಪ್ರಕ್ರಿಯೆಯನ್ನು ನೆಪ ಮಾಡಿಕೊಂಡು ಯಾವುದೇ ವರ್ಗದ ಅರ್ಹ ನಾಗರಿಕರ ಮತದಾನದ ಹಕ್ಕನ್ನು ದುರ್ಬಲಗೊಳಿಸುವ ಪ್ರಯತ್ನ ನಡೆದರೆ, SDPI ಅದನ್ನು ಕೇವಲ ರಾಜಕೀಯವಾಗಿ ವಿರೋಧಿಸುವುದಲ್ಲ; ಕಾನೂನುಬದ್ಧವಾಗಿ ಪ್ರಶ್ನಿಸಿ, ಜನರನ್ನು ಸಂಘಟಿಸಿ, ಪ್ರಜಾಸತ್ತಾತ್ಮಕವಾಗಿ ತೀವ್ರ ಪ್ರತಿರೋಧ ದಾಖಲಿಸಲಿದೆ.
ಯಾರ ಮತವನ್ನು ಉಳಿಸಬೇಕು, ಯಾರ ಮತವನ್ನು ತೆಗೆದುಹಾಕಬೇಕು ಎಂಬುದನ್ನು ರಾಜಕೀಯ ಹಿತಾಸಕ್ತಿಗಳು ನಿರ್ಧರಿಸುವ ಪರಿಸ್ಥಿತಿ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ. ಮತದಾರರ ಪಟ್ಟಿ ಯಾವುದೇ ಪಕ್ಷದ ರಾಜಕೀಯ ಪ್ರಯೋಗಾಲಯವಲ್ಲ; ಅದು ಜನರ ಪ್ರಜಾಸತ್ತಾತ್ಮಕ ಹಕ್ಕಿನ ದಾಖಲೆ.

ಜನರ ರಕ್ಷಣೆಗೆ ‘SIR Legal Cell’

ಈ ಹಿನ್ನೆಲೆಯಲ್ಲಿ SDPI ಮಂಗಳೂರು ನಗರ ಜಿಲ್ಲಾ ಘಟಕವು “SIR Legal Cell” ಅನ್ನು ಸಕ್ರಿಯಗೊಳಿಸಿದೆ.

ನೋಟಿಸ್ ಪಡೆದಿರುವ ಮತದಾರರಿಗೆ ನೋಟಿಸ್‌ಗೆ ಉತ್ತರ ಸಲ್ಲಿಸುವ ಕುರಿತು ಮಾರ್ಗದರ್ಶನ,Declaration ಹಾಗೂ ಅಗತ್ಯ ದಾಖಲೆಗಳ ಕುರಿತು ಮಾಹಿತಿ,Claims & Objections ಸಲ್ಲಿಸುವ ಪ್ರಕ್ರಿಯೆಯಲ್ಲಿ ನೆರವು,ERO ವಿಚಾರಣೆಗೆ ಹಾಜರಾಗುವ ಕುರಿತು ಮಾರ್ಗದರ್ಶನ
ಮತದಾರರ ಪಟ್ಟಿಯಲ್ಲಿ ಹೆಸರು ಉಳಿಸಿಕೊಳ್ಳಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿ ಈ ಕಾನೂನು ನೆರವು ಕೇವಲ ನಗರ ಪ್ರದೇಶಕ್ಕೆ ಸೀಮಿತವಾಗುವುದಿಲ್ಲ. ಮಂಗಳೂರು ನಗರ ಜಿಲ್ಲೆಯ ಪ್ರತಿ ಗ್ರಾಮ ಮತ್ತು ವಾರ್ಡ್ ಮಟ್ಟದಲ್ಲಿ SIR Legal Cell ತಂಡಗಳನ್ನು ರಚಿಸಿ, ಜನರ ಮನೆ ಬಾಗಿಲಿಗೆ ತೆರಳಿ ಜಾಗೃತಿ ಮತ್ತು ನೆರವು
ನೋಟಿಸ್ ಪಡೆದಿರುವ ಯಾವುದೇ ಅರ್ಹ ಮತದಾರರು ಭಯಪಡುವ ಅಗತ್ಯವಿಲ್ಲ. ತಮ್ಮ ಹಕ್ಕಿನ ಬಗ್ಗೆ ಮಾಹಿತಿ ಪಡೆದು, ಅಗತ್ಯ ದಾಖಲೆಗಳೊಂದಿಗೆ ಕಾನೂನುಬದ್ಧವಾಗಿ ಉತ್ತರಿಸುವಂತೆ SDPI ಕರೆ ನೀಡುತ್ತದೆ. ಮತದಾನದ ಹಕ್ಕು ಯಾರ ದಯೆಯಲ್ಲ!”
ಮತದಾನದ ಹಕ್ಕು ಯಾರೊಬ್ಬರ ಕೃಪೆಯಿಂದ ಸಿಗುವುದಲ್ಲ. ಅದು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲಭೂತ ಹಕ್ಕು.
SIR ಜನರ ಹಕ್ಕುಗಳನ್ನು ರಕ್ಷಿಸುವ ಪ್ರಕ್ರಿಯೆಯಾಗಿದ್ದರೆ SDPI ಅದನ್ನು ಸ್ವಾಗತಿಸುತ್ತದೆ. ಆದರೆ ಅದೇ SIR ಹೆಸರಿನಲ್ಲಿ ಅರ್ಹ ಮತದಾರರನ್ನು ಹೊರಗಿಡುವ, ಭಯಭೀತಿಗೊಳಿಸುವ ಅಥವಾ ಅವರ ಮತದಾನದ ಹಕ್ಕನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನ ನಡೆದರೆ, ಅದರ ವಿರುದ್ಧ SDPI ಮುಂಚೂಣಿಯಲ್ಲಿ ನಿಂತು ಹೋರಾಟ ನಡೆಸಲಿದೆ.
ಜನಸಂಪರ್ಕಕ್ಕಾಗಿ ನುರಿತ ನ್ಯಾಯವಾದಿಗಳಾದ ಫಾರೂಕ್ ಸುರತ್ಕಲ್, ಇಲ್ಯಾಸ್ ಮಂಗಳೂರು, ಅಬು ಹಾರಿಸ್, ತಾಜುದ್ದೀನ್, ರುಬಿಯಾ, ಮುಪೀದ,, ಸಮದ್ ರವರ ಒಳಗೊಂಡ ತಂಡವನ್ನು ಕೂಡ SDPI ರಚಿಸಿದೆ.

ಮತದಾರರ ಹಕ್ಕಿನ ಮೇಲೆ ನಡೆಯುವ ಯಾವುದೇ ಅನ್ಯಾಯವನ್ನು ಮೌನವಾಗಿ ನೋಡುತ್ತಾ ಕುಳಿತುಕೊಳ್ಳುವ ಪ್ರಶ್ನೆಯೇ ಇಲ್ಲ. ಪ್ರತಿ ಅರ್ಹ ಮತದಾರನ ಮತದಾನದ ಹಕ್ಕನ್ನು ರಕ್ಷಿಸುವವರೆಗೆ SDPI ಜನರೊಂದಿಗೆ ನಿಂತು ಕಾನೂನುಬದ್ಧ ಮತ್ತು ಪ್ರಜಾಸತ್ತಾತ್ಮಕ ಹೋರಾಟವನ್ನು ಮುಂದುವರಿಸಲಿದೆ ಎಂದು ಜಮಾಲ್ ಜೋಕಟ್ಟೆ ಎಚ್ಚರಿಸಿದ್ದಾರೆ.

About The Author

Leave a Reply