September 12, 2026
WhatsApp Image 2026-09-12 at 9.18.30 AM

ಮಂಗಳೂರು: ದೇಶದಲ್ಲಿ ಗೋಹತ್ಯೆಯನ್ನು ಸಂಪೂರ್ಣ ನಿಷೇಧಿಸಲು ಕೇಂದ್ರ ಸರ್ಕಾರ ಕಾನೂನು ಜಾರಿಗೆ ತರಬೇಕು ಹಾಗೂ ಗೋವನ್ನು ರಾಷ್ಟ್ರಮಾತೆಯಾಗಿ ಘೋಷಿಸಬೇಕು ಎಂದು ಆಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 10 ಲಕ್ಷಕ್ಕೂ ಅಧಿಕ ಸಹಿ ಸಂಗ್ರಹಿಸುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಪ್ರಾಂತ ಸಂಚಾಲಕ ಶರಣ್ ಪಂಪವೆಲ್ ತಿಳಿಸಿದ್ದಾರೆ. 

‘ಗೋಮಾತೆಯ ಗೌರವ’ ಅಭಿಯಾನದ ಮೂರನೇ ಹಂತವಾಗಿ ಜಿಲ್ಲೆಯಾದ್ಯಂತ ಮುಂದಿನ ಎರಡು ತಿಂಗಳ ಕಾಲ ಮನೆಮನೆಗೆ ತೆರಳಿ ಸಹಿ ಸಂಗ್ರಹಿಸಲಾಗುವುದು. ಜಿಲ್ಲೆಯ ಒಂಬತ್ತು ತಾಲೂಕುಗಳಲ್ಲಿ ಸಮಿತಿಗಳನ್ನು ರಚಿಸಲಾಗಿದ್ದು, ಪ್ರಮುಖ ದೇವಸ್ಥಾನಗಳು ಹಾಗೂ ಗಣೇಶೋತ್ಸವ ಸಮಿತಿಗಳ ಮೂಲಕವೂ ಸಹಿ ಸಂಗ್ರಹಿಸಲಾಗುತ್ತದೆ.

ದೇಶಾದ್ಯಂತ ಈ ಹಂತದಲ್ಲಿ 30 ಕೋಟಿ ಸಹಿ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಡಿಸೆಂಬರ್ 17ರಂದು ಮೂರು ಲಕ್ಷಕ್ಕೂ ಅಧಿಕ ಗೋಪ್ರೇಮಿಗಳ ಬೃಹತ್ ಸಮಾವೇಶ ನಡೆಸಿ ಸಹಿಪತ್ರಗಳನ್ನು ರಾಜ್ಯಪಾಲರಿಗೆ ಸಲ್ಲಿಸಲಾಗುವುದು. ದಕ್ಷಿಣ ಕನ್ನಡದಿಂದ 10 ಸಾವಿರಕ್ಕೂ ಅಧಿಕ ಗೋಸೇವಾ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಶರಣ್ ಪಂಪವೆಲ್ ಹೇಳಿದರು.

ಗೋವನ್ನು ರಾಷ್ಟ್ರಮಾತೆಯಾಗಿ ಘೋಷಿಸುವುದು, ಗೋಹತ್ಯೆ ಸಂಪೂರ್ಣ ನಿಷೇಧ ಹಾಗೂ ಗೋವಿನ ಕಲ್ಯಾಣಕ್ಕಾಗಿ ಪ್ರತ್ಯೇಕ ಸಚಿವ ಸಂಪುಟ ಖಾತೆ ರಚಿಸುವುದು ಅಭಿಯಾನದ ಪ್ರಮುಖ ಬೇಡಿಕೆಗಳಾಗಿವೆ.

ಪತ್ರಿಕಾಗೋಷ್ಠಿಯ ಬಳಿಕ ಶ್ರೀ ಶಿವಯೋಗಿ ದುರ್ಗಾನಂದ ಸ್ವಾಮೀಜಿ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಎಚ್.ಕೆ. ಪುರುಷೋತ್ತಮ್, ಗೋಪಾಲ್ ಕುತ್ತಾರ್, ಶಿವಾನಂದ ಮೆಂಡನ್, ಅಶೋಕ್ ಇಳಂತಿಲ, ಉದಯ್ ಶಂಕರ್ ಸೇರಿದಂತೆ ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು.

About The Author

Leave a Reply