September 24, 2026
WhatsApp Image 2026-09-24 at 6.08.52 PM

ಬಂಟ್ವಾಳ: ಮಾಜಿ ಸಚಿವ ಬಿ. ರಮಾನಾಥ ರೈ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾದ ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಹಾಗೂ ಬೆದರಿಕೆಯ ರೀತಿಯ ಸಂದೇಶ ಪ್ರಕಟಿಸಿದ ಆರೋಪದಡಿ ಪ್ರಭಾಕರ ಹೆಗ್ಡೆ ಎಂಬವರ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ. 130/2026ರಂತೆ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಕಲಂ 351(2), 352ರಡಿ ಪ್ರಕರಣ ದಾಖಲಾಗಿದ್ದು, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದಾರ್ ಅವರು ದೂರು ನೀಡಿದ್ದಾರೆ.

ಸೆ.20ರಂದು ಕಾರ್ಕಳ ರಾಷ್ಟ್ರೀಯ ಹೆದ್ದಾರಿ 169ರ ಸಾಣೂರು ಶ್ರೀರಾಮ ಮಂದಿರದ ಡಿವೈಡರ್ ಕ್ರಾಸ್ ಬಳಿ ರಮಾನಾಥ ರೈ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿತ್ತು. ಘಟನೆಯಲ್ಲಿ ರಮಾನಾಥ ರೈ ಸೇರಿದಂತೆ ಅವರ ಆಪ್ತ ಸಹಾಯಕರು, ಅಂಗರಕ್ಷಕರು ಹಾಗೂ ಕಾರು ಚಾಲಕರಿಗೆ ಗಾಯಗಳಾಗಿದ್ದು, ಮಂಗಳೂರಿನ ಯೆನೆಪೋಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಪಘಾತದ ದೃಶ್ಯವೊಂದನ್ನು ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನಲ್ಲಿ ವ್ಯಕ್ತಿಯೊಬ್ಬರು ಪೋಸ್ಟ್ ಮಾಡಿದ್ದರು. ಈ ಪೋಸ್ಟ್‌ಗೆ ಪ್ರಭಾಕರ ಹೆಗ್ಡೆ ಅವರು ಅವಹೇಳನಕಾರಿ ಹಾಗೂ ಬೆದರಿಕೆಯ ರೀತಿಯ ಸಂದೇಶ ಪ್ರಕಟಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ನಿಂದನಾತ್ಮಕ ಭಾಷೆ ಬಳಸಿ ಬೆದರಿಕೆ ಹಾಕಿರುವ ಆರೋಪದ ಹಿನ್ನೆಲೆಯಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ.

ಮಾನ್ಯ ನ್ಯಾಯಾಲಯದ ಡಿಸ್ ನಂ. 845/2026ಕ್ಕೆ ಸಂಬಂಧಿಸಿದಂತೆ ಎಂ.ಪಿ.ಸಿ. 2319ರ ಮೂಲಕ ಬಂದ ದೂರನ್ನು ಸ್ವೀಕರಿಸಿದ ಬಳಿಕ ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ

About The Author

Leave a Reply