ಕಾಸರಗೋಡು: ಉಗ್ರಗಾಮಿ ಪ್ರಕರಣವೊಂದಕ್ಕೆ ಸಂಬಂಧಿಸಿ ತಲೆಮರೆಸಿಕೊಂಡು ಹೊಸದುರ್ಗ ಪಡನ್ನದ ರಹಸ್ಯ ಕೇಂದ್ರವೊಂದರಲ್ಲಿ ನೆಲೆಸಿದ್ದ ಉಗ್ರಗಾಮಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ನಡೆಸಿದ ಕಾರ್ಯಾಚರಣೆಯಲ್ಲಿ ಬಂಧಿಸಿದ ಘಟನೆ ನಡೆದಿದೆ.
ಪಶ್ಚಿಮ ಬಂಗಾಲ ನಿವಾಸಿ ಎಂ.ಬಿ. ಶಾಬ್ ಶೇಖ್ (32) ಬಂಧಿತ. ಈತ ಬಾಂಗ್ಲಾ ದೇಶದ ಪ್ರಜೆಯಾಗಿರುವ ಶಂಕೆಯನ್ನು ತನಿಖಾ ತಂಡ ವ್ಯಕ್ತಪಡಿಸಿದ್ದು, ಆ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಬಂಧಿತನು ಅಸ್ಸಾಂನಲ್ಲಿ ಇತ್ತೀಚೆಗೆ ನಡೆದ ಉಗ್ರಗಾಮಿ ಪ್ರಕರಣವೊಂದರ ಆರೋಪಿಯಾಗಿದ್ದಾನೆ. ಆತನ ವಿರುದ್ಧ ಯು.ಎ.ಪಿ.ಎ. ಪ್ರಕಾರ ಪ್ರಕರಣ ದಾಖಲಿಸಲಾಗಿದ್ದು, ಬಳಿಕ ಆತ ಅಸ್ಸಾಂನಿಂದ ಪರಾರಿಯಾಗಿ ಕೇರಳಕ್ಕೆ ಬಂದಿದ್ದ. ಈ ಮಾಹಿತಿ ತನಿಖಾ ತಂಡಕ್ಕೆ ಲಭಿಸಿತ್ತು.
ಆತನ ಪತ್ತೆಗಾಗಿ ಅಸ್ಸಾಂ ಪೊಲೀಸರು ಹಾಗೂ ಪ್ರಕರಣದ ವಿಶೇಷ ತನಿಖೆ ನಡೆಸುತ್ತಿರುವ ಎನ್ಐಎ ಕೂಡ ಲುಕೌಟ್ ನೋಟಿಸ್ ಜಾರಿಗೊಳಿಸಿತ್ತು.ಆರೋಪಿಯನ್ನು ಈಗ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.