ಬೆಳ್ತಂಗಡಿ: ತಾಲೂಕಿನ ಕುವೆಟ್ಟು ಗ್ರಾಮದ ಸರಕಾರಿ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಶೆಡ್ ನ್ನು ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ನೇತೃತ್ವದಲ್ಲಿ ತೆರವುಗೊಳಿಸಲಾಯಿತು. ಕುವೆಟ್ಟು ಗ್ರಾಮದ ಮದಡ್ಕ ಹಾಲಿನ ಡೈರಿ ಹಿಂಭಾಗದ ಸರಕಾರಿ ಖಾಲಿ ಜಾಗದಲ್ಲಿ, ರವೂಫ್ ಮತ್ತು ನಿಸಾರ್ ಸಹೋದರರು ಅಕ್ರಮವಾಗಿ ಶೆಡ್ ನಿರ್ಮಾಣ ಮಾಡಿದ್ದರು. ಈ ಬಗ್ಗೆ ಬೆಳ್ತಂಗಡಿ ಕಂದಾಯ ಇಲಾಖೆಗೆ ದೂರು ಬಂದಿತ್ತು. ಅದರಂತೆ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿ ಜ.18ಕ್ಕೆ ಜಾಗದ ಪರಿಶೀಲನೆಗೆ ತೆರಳಿದ್ದರು. ಈ ವೇಳೆ ಸಹೋದರರಿಬ್ಬರು ಕರ್ತವ್ಯಕ್ಕೆ ಅಡ್ಡಿಪಡಿಸಿ ತಹಶೀಲ್ದಾರ್ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಬಳಿಕ ಕಂದಾಯ ನಿರೀಕ್ಷಕರಿಗೂ ಬೆದರಿಕೆಯೊಡ್ಡಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದರು. ಈ ಬಗ್ಗೆ ತಹಶೀಲ್ದಾರ್ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಜ.19ರಂದು ದೂರು ನೀಡಿದ್ದರು. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.