ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ..!

ಮನೆ ಕಿಟಕಿ, ಬಾಗಿಲು ಮುಚ್ಚಿಟ್ಟು ಮನೆಯೊಳಗೆ ವಿಷಾನಿಲ ತುಂಬಿಸಿ ತನ್ನ ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಹಾಸನ ನಗರದ ದಾಸರಕೊಪ್ಪಲಿನಲ್ಲಿ ಮಂಗಳವಾರ (ಜ.2 ರಂದು) ಬೆಳಗ್ಗೆ ಬೆಳಕಿಗೆ ಬಂದಿದೆ.

ತುಮಕೂರಿನ ಬೇಕರಿಯಲ್ಲಿ ಕೆಲಸ ಮಾಡುವ ಹಾಸನ ತಾಲೂಕು ಸೀಗೆ ಗ್ರಾಮದ ತೀರ್ಥ ಎಂಬವರ ಪತ್ನಿ ಶಿವಮ್ಮ (36), ಮಕ್ಕಳಾದ ಸಿಂಚು (7) ಪವನ (10) ಆತ್ಮಹತ್ಯೆಗೆ ಶರಣಾದ ದುರ್ದೈವಿಗಳು.

 

ಸೋಮವಾರ ಸಂಜೆ ಪತ್ನಿಗೆ ದೂರವಾಣಿ ಕರೆ ಮಾಡಿದ್ದ ಪತಿ ತೀರ್ಥ ತಾನು ಹಾಸನಕ್ಕೆ ಬರುತ್ತಿದ್ದು ರಾತ್ರಿ ಊಟಕ್ಕೆ ಅಡುಗೆ ಸಿದ್ಧಪಡಿಸಲು ಹೇಳಿದ್ದರು. ಆದರೆ ರಾತ್ರಿ ತಡವಾಗಿ ಬಂದ ಆತ ಬಾಗಿಲು ತಟ್ಟಿದಾಗ ಪತ್ನಿ ಬಾಗಿಲು ತೆರೆಯಲಿಲ್ಲ. ಫೋನ್ ಕರೆಯನ್ನೂ ಸ್ವೀಕರಿಸಲಿಲ್ಲ. ಆಕೆ ನಿದ್ರೆ ಹೋಗಿರಬಹುದು ಎಂದು ಭಾವಿಸಿದ ಪತಿ ಮನೆಯ ಮೇಲ್ಛಾವಣಿಗೆ ಹೋಗಿ ಮಲಗಿದ್ದರು.

ಬೆಳಗ್ಗೆ ಕೆಳಗೆ ಬಂದು ಪುನಃ ಬಾಗಿಲು ಬಡಿಸರೂ ಬಾಗಿಲು ತೆಗೆಯಲಿಲ್ಲ, ಫೋನ್ ಕರೆ ಮಾಡಿದರೂ ಪ್ರತಿಕ್ರಿಯೆ ಬಾರದ್ದರಿಂದ ಅನುಮಾನಗೊಂಡ ಆತ ಮನೆ ಮಾಲೀಕರ ಸಹಾಯದಿಂದ ಇನ್ನೊಂದು ಕೀ ಪಡೆದು ಬಾಗಿಲು ತೆರೆದು ಒಳಗೆ ಹೋದರು.

ಮನೆಯ ಒಳಗೆ ಗಾಢವಾದ ಎಲ್ಪಿಜಿ ವಾಸನೆ ತುಂಬಿತ್ತು. ಹೀಗಾಗಿ ಮೊದಲು ಕಿಟಕಿ, ಬಾಗಿಲು ತೆರೆದಿಟ್ಟು ಕೆಲ ನಿಮಿಷಗಳ ನಂತರ ಒಳ ಹೋದಾಗ ನೆಲದ ಮೇಲೆ ಕುಳಿತ ತಾಯಿಯ ಕಾಲುಗಳ ಮೇಲೆ ಇಬ್ಬರು ಮಕ್ಕಳೂ ಪ್ರಾಣ ಕಳೆದುಕೊಂಡ ದಾರುಣ ದೃಶ್ಯ ಕಣ್ಣಿಗೆ ಬಿತ್ತು.

ಸಾವಿಗೆ ಕಾರಣ ತಿಳಿಯಬೇಕಿದೆ. ಪೆನ್ಷನ್ ಮೊಹಲ್ಲಾ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

Leave a Reply

Your email address will not be published. Required fields are marked *