ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಉಪಚುನಾವಣೆಯ ಮತ ಎಣಿಕೆಯು ಅ.24ರಂದು ಮಂಗಳೂರಿನ ಸಂತ ಅಲೋಶಿಯಸ್ ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿದೆ.
ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಆರಂಭವಾಗಲಿದೆ. ಒಂದು ಕೊಠಡಿಯಲ್ಲಿ ಮತಪತ್ರಗಳ ಎಣಿಕೆಗೆ ವ್ಯವಸ್ಥೆ ಮಾಡಲಾಗಿದೆ.
ಮತಪತ್ರಗಳ ಎಣಿಕೆಗೆ ಹನ್ನೆರಡು ಟೇಬಲ್ ಗಳನ್ನು ಬಳಸಲಾಗುವುದು. ಪ್ರತಿ ಟೇಬಲ್ ಗೆ ಒಬ್ಬ ಎಣಿಕೆ ಮೇಲ್ವಿಚಾರಕ, ಒಬ್ಬ ಸಹಾಯಕ ಮತ್ತು ಒಬ್ಬ ‘ಡಿ’ ಗ್ರೂಪ್ ಸಿಬ್ಬಂದಿ ಇರಲಿದ್ದಾರೆ. ಒಟ್ಟು 392 ಮತಪೆಟ್ಟಿಗೆಗಳನ್ನು ವಿತರಿಸಲಾಗುತ್ತಿದ್ದು, ಪ್ರತಿ ಟೇಬಲ್ ಗೆ 33 ಬಾಕ್ಸ್ ಗಳನ್ನು ನಿಗದಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಮೊದಲ ಹಂತದಲ್ಲಿ, ಒಟ್ಟು ಮತಗಳನ್ನು ಎಣಿಕೆ ಮಾಡಲಾಗುತ್ತದೆ ಮತ್ತು ಮಿಶ್ರಗೊಳಿಸಲಾಗುತ್ತದೆ, ನಂತರ ಎರಡನೇ ಹಂತದಲ್ಲಿ ಮತಪತ್ರಗಳ ಪರಿಶೀಲನೆ ಮತ್ತು ನಂತರ ಮೊದಲ ಆದ್ಯತೆಯ ಮತಗಳ ಎಣಿಕೆ ನಡೆಯಲಿದೆ.
ಅಕ್ಟೋಬರ್ 21 ರಂದು ನಡೆದ ಚುನಾವಣೆಯಲ್ಲಿ ದ.ಕ. ಮತ್ತು ಉಡುಪಿ ಜಿಲ್ಲೆಯ 392 ಮತಗಟ್ಟೆಗಳಲ್ಲಿ 6032 ಮತದಾರರ ಪೈಕಿ 5906 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು.
ಬಿಜೆಪಿಯಿಂದ ಕಿಶೋರ್ ಕುಮಾರ್, ಕಾಂಗ್ರೆಸ್ ನಿಂದ ರಾಜು ಪೂಜಾರಿ, ಎಸ್ ಡಿಪಿಐನಿಂದ ಅನ್ವರ್ ಸಾದತ್, ಪಕ್ಷೇತರರಾಗಿ ದಿನಕರ ಉಳ್ಳಾಲ್ ಕಣದಲ್ಲಿದ್ದಾರೆ. ಈ ಸ್ಥಾನಕ್ಕೆ ಉಪಚುನಾವಣೆ ನಡೆಯಿತು